ADVERTISEMENT

ಉಡುಪಿ: 31,679 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ

ಇಂದಿನ ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿಲ್ಲ: ಸಚಿವ ವಿ.ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 14:15 IST
Last Updated 2 ಅಕ್ಟೋಬರ್ 2022, 14:15 IST
ಉಡುಪಿ ಅಮೃತಗಾರ್ಡ್‌ನಲ್ಲಿ ಭಾನುವಾರ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 350 ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 31,679 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.
ಉಡುಪಿ ಅಮೃತಗಾರ್ಡ್‌ನಲ್ಲಿ ಭಾನುವಾರ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 350 ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 31,679 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.   

ಉಡುಪಿ: ಇಂದಿನ ಶಿಕ್ಷಣ ಪದ್ಧತಿಯಿಂದ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿಲ್ಲ. ಪಠ್ಯದಲ್ಲಿ ರಾಷ್ಟ್ರೀಯತೆನ್ನು ಹೇಳಲು ಮುಂದಾದರೆ ಕೆಲವರು ಕೇಸರಿಕರಣದ ಹುಯಿಲೆಬ್ಬಿಸುತ್ತಾರೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ಅಮೃತಗಾರ್ಡ್‌ನಲ್ಲಿ ಭಾನುವಾರ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 350 ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆ, ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 31,679 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮನೆಗಳಲ್ಲಿ ಮಕ್ಕಳಿಗೆ ದೇಶವನ್ನು ಪ್ರೀತಿಸುವ ತಿಳಿವಳಿಕೆ ನೀಡುವ ಮೂಲಕ ಸಮಾಜಕ್ಕೆ ಪೂರಕವಾದ ವ್ಯಕ್ತಿತ್ವ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದರು.

ADVERTISEMENT

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಧಾರ್ಮಿಕತೆಗೆ ಮನ್ನಣೆ ಸಿಗುತ್ತಿದೆ. ಎಲ್ಲದಕ್ಕೂ ಸರ್ಕಾರವನ್ನು ಅವಲಂಬಿಸದೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಕೋಟ್ಯಂತರ ಮಕ್ಕಳಿಗೆ ಜ್ಞಾನಾರ್ಜನೆಗೆ ಅವಕಾಶ ನೀಡಲಾಗುತ್ತಿದ್ದು ದೇಶಕ್ಕೆ ಮಾದರಿಯಾಗಿದೆ. ಪ್ರತಿ ಗ್ರಾಮಗಳಲ್ಲಿ ದಾನಿಗಳ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದರು.

ಚಿತ್ರನಟ ರಮೇಶ್ ಅರವಿಂದ್ ಮಾತನಾಡಿ, ಭವಿಷ್ಯವನ್ನು ರೂಪಿಸುವ ನಾವಿಕರು ನಾವಾಗಬೇಕು. ಕುಂಟು ನೆಪಗಳನ್ನು ಹೇಳದೆ ಹೊಣೆ ಹೊರುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಸಕ್ತಿ ಮತ್ತು ಪರಿಣತ ಕ್ಷೇತ್ರವನ್ನು ಮೊದಲೇ ಗುರುತಿಸಿ ಮುಂದಡಿ ಇರಿಸಬೇಕು. ಹಣ ಹಾಗೂ ಆಸ್ತಿ ಸಂಪಾದನೆಕ್ಕಿಂತ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಅವರು, ಶಿಕ್ಷಣ ಸಂಸ್ಕಾರ ಹಾಗೂ ಬದುಕುವ ದಾರಿಯನ್ನು ಕಲಿಸುತ್ತದೆ. ನಮ್ಮ ನಿರ್ಧಾರಗಳು ದಿಟ್ಟ ಹಾಗೂ ಸ್ಪಷ್ಟವಾಗಿರಬೇಕು. ಆಲೋಚನೆ ಹಾಗೂ ವಿಚಾರ ಮಂಡನೆ ವ್ಯಕ್ತಿತ್ವವನ್ನು ರೂಪಿಸುತ್ತದೆ. ಅವಕಾಶವನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ಕಲೆ ಕರಗತವಾಗಬೇಕು. ದುಡಿಮೆಯ ಒಂದು ಭಾಗವನ್ನು ನಮ್ಮನ್ನು ಬೆಳೆಸಿದ ಸಮಾಜಕ್ಕೆ ನೀಡುವುದರಿಂದ ನಾವು ಬೆಳೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ರಘುಪತಿ ಭಟ್ ಅವರು, ಎಲ್ಲ ಶ್ರೀಮಂತಿಕೆಗಿಂತ ಗುಣ ಶ್ರೀಮಂತಿಕೆಯೇ ಶ್ರೇಷ್ಠ. ಇಂತಹ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ಎಚ್.ಎಸ್.ಶೆಟ್ಟಿಯವರು ಪ್ರಚಾರ ಬಯಸದೆ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ 31,679 ಮಕ್ಕಳಿಗೂ ಗುಣಮಟ್ಟದ ಸಮವಸ್ತ್ರ ನೀಡುವ ಮೂಲಕ ಜಿಲ್ಲೆಯ ಚರಿತ್ರೆಯಲ್ಲಿ ಹೊಸ ದಾಖಲೆ ಮಾಡಿದ್ದಾರೆ ಎಂದರು.

ಶಾಸಕರಾದ ಲಾಲಾಜಿ ಆರ್. ಮೆಂಡನ್, ಬಿ.ಎಂ. ಸುಕುಮಾರ ಶೆಟ್ಟಿ, ಪುದುಚೇರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಹಾಲಾಡಿ ಪ್ರತಾಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಡಿಡಿಪಿಐ ಎನ್.ಕೆ.ಶಿವರಾಜ್, ಬೆಂಗಳೂರಿನ ಹೆಗ್ಗುಂಜೆ ರಾಜೀವ್ ಚಾರಿಟೇಬಲ್ ಸೊಸೈಟಿ ಉಪಾಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಇದ್ದರು.

ಸೊಸೈಟಿಯಿಂದ ನಟ ರಮೇಶ್ ಅರವಿಂದ್ ಹಾಗೂ ಪ್ರೊ.ಹಾಲಾಡಿ ಪ್ರತಾಪ್ ಕುಮಾರ್ ಶೆಟ್ಟಿ ಅವರನ್ನು ಶಾಸಕ ಕೆ.ರಘುಪತಿ ಭಟ್ ಸನ್ಮಾಣಿಸಿದರು. ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಹಾಗೂ ಕುಂದಾಪುರ ವಲಯ ಶಿಕ್ಷಣ ಸಂಸ್ಥೆಗಳ ಸಂಸ್ಥೆಗಳ ಪರವಾಗಿ ಎಚ್.ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ನಿರ್ವಹಣಾ ಸಮಿತಿ ಕಾರ್ಯದರ್ಶಿ ಎಚ್.ರಾಜೀವ ಶೆಟ್ಟಿ ಸ್ವಾಗತಿಸಿದರು. ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಡ್ಪಾಡಿ ಅಭಿನಂದನಾ ಮಾತುಗಳನ್ನು ಹೇಳಿದರು. ನಿವೃತ್ತ ಮುಖ್ಯ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ಹಾಗೂ ಪತ್ರಕರ್ತ ರಾಜೇಶ್ ಕೆ.ಸಿ ಕಾರ್ಯಕ್ರಮ ನಿರೂಪಿಸಿದರು. ಡಾ.ಆದರ್ಶ ಹೆಗ್ಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.