ADVERTISEMENT

ಸ್ಪರ್ಧಾ ಕಣದಲ್ಲಿ 1,349 ಅಭ್ಯರ್ಥಿಗಳು

ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ: 63 ಮಂದಿ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 16:12 IST
Last Updated 15 ಡಿಸೆಂಬರ್ 2020, 16:12 IST

ಉಡುಪಿ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಕಣದಲ್ಲಿ ಅಂತಿಮವಾಗಿ 2,349 ಅಭ್ಯರ್ಥಿಗಳು ಉಳಿದಿದ್ದಾರೆ. 63 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯ 67 ಗ್ರಾಮ ಪಂಚಾಯಿತಿಗಳ 1,122 ಕ್ಷೇತ್ರಗಳಿಗೆ ಡಿ.22 ರಂದು ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, 12 ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆಯಾಗಿಲ್ಲ. ಜತೆಗೆ, 63 ಮಂದಿ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ 1,047 ಸ್ಥಾನಗಳಿಗೆ 2,349 ಅಭ್ಯರ್ಥಿಗಳು ಸೆಣಸುತ್ತಿದ್ದಾರೆ.

ಉಡುಪಿ ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳ 329 ಸ್ಥಾನಗಳ ಪೈಕಿ 9 ಮಂದಿ ಅವಿರೋಧವಾಗಿ ಆಯ್ಕೆಯಾದರೆ, 320 ಸ್ಥಾನಗಳಿಗೆ 684 ಮಂದಿ ಕಣದಲ್ಲಿದ್ದಾರೆ. ಹೆಬ್ರಿಯ 9 ಪಂಚಾಯಿತಿಗಳ 122 ಸ್ಥಾನಗಳ ಪೈಕಿ 7 ಮಂದಿ ಅವಿರೋಧ ಆಯ್ಕೆಯಾದರೆ 115 ಸ್ಥಾನಗಳಿಗೆ 255 ಮಂದಿ ಅಖಾಡದಲ್ಲಿದ್ದಾರೆ.

ADVERTISEMENT

ಬೈಂದೂರು ತಾಲ್ಲೂಕಿನ 15 ಪಂಚಾಯಿತಿಗಳ 259 ಸ್ಥಾನಗಳಿಗೆ 8 ಮಂದಿ ಅವಿರೋಧ ಆಯ್ಕೆಯಾಗಿದ್ದು, 251 ಸ್ಥಾನಗಳಿಗೆ 585 ಅಭ್ಯರ್ಥಿಗಳು ಗೆಲ್ಲಲು ಪೈಪೋಟಿಗೆ ಸಿದ್ಧರಾಗಿದ್ದಾರೆ. ಬ್ರಹ್ಮಾವರದ 27 ಪಂಚಾಯಿತಿಗಳ 412 ಸ್ಥಾನಗಳಿಗೆ 39 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 361 ಸ್ಥಾನಗಳಿಗೆ 825 ಸ್ಪರ್ಧಿಗಳು ಸೆಣೆಸುತ್ತಿದ್ದಾರೆ.

12 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ:

ಬ್ರಹ್ಮಾವರದ ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿಯ 12 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. ಮೂರು ಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರ ಕೊನೆ ಕ್ಷಣದಲ್ಲಿ ಹಿಂಪಡೆದಿದ್ದರಿಂದ ಚುನಾವಣೆಯೇ ನಡೆಯುತ್ತಿಲ್ಲ.

ಚುನಾವಣಾ ಕಣದಲ್ಲಿ 1,108 ಮಹಿಳೆಯರು, 149 ಎಸ್‌ಸಿ, 182 ಎಸ್‌ಟಿ, 543 ಹಿಂದುಳಿದ ‘ಅ’ ವರ್ಗ, 132 ಹಿಂದುಳಿದ ‘ಬ’ ವರ್ಗ ಮತ್ತು 1,343 ಸಾಮಾನ್ಯ ಕ್ಷೇತ್ರದ ಸ್ಪರ್ಧಿಗಳಿದ್ದಾರೆ ಎಂದು ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.