ಕಾಪು (ಪಡುಬಿದ್ರಿ): ‘ಕರಾವಳಿ ಜಿಲ್ಲೆಗಳು ಸೂಕ್ಷ್ಮತೆಯಿಂದಾಗಿ ದೇಶ ಮಾತ್ರವಲ್ಲದೇ ಪ್ರಪಂಚದಾದ್ಯಂತ ಪ್ರಚಾರದಲ್ಲಿವೆ. ಸಂವಿಧಾನದ ಚೌಕಟ್ಟಿನೊಳಗೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ. ಶಾಂತಿ, ಸೌಹಾರ್ದಕ್ಕಾಗಿ ಸರ್ಕಾರದ ಪ್ರಯತ್ನ ನಿರಂತರವಾಗಿ ಸಾಗಿಬರಲಿದೆ. ಪೊಲೀಸ್ ಇಲಾಖೆಯೂ ಅದಕ್ಕೆ ಪೂರಕವಾಗಿ ಸಹಕಾರ ನೀಡುತ್ತಿದ್ದು, ನೀವೆಲ್ಲರೂ ಕರಾವಳಿಯ ಸೌಹಾರ್ದ ಉಳಿಸಿ, ಬೆಳೆಸುವಲ್ಲಿ ಕೈ ಜೋಡಿಸಬೇಕು’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಕರೆ ನೀಡಿದರು.
ಕಾಪು ರಾಜೀವ ಭವನಕ್ಕೆ ಶನಿವಾರ ಸಂಜೆ ಭೇಟಿ ನೀಡಿ, ಮಾತನಾಡಿದ ಅವರು, ‘ಕರಾವಳಿಯಲ್ಲಿ ಸ್ವಾರ್ಥಕ್ಕಾಗಿ ಕೋಮು ಪ್ರಚೋದನಾ ಶಕ್ತಿಗಳು ನಡೆಸುತ್ತಿರುವ, ಕೋಮು ದ್ವೇಷದ ವಿಚಾರಗಳಿಂದಾಗಿ ಪಕ್ಷ ಅಧಿಕಾರದಿಂದ ದೂರವುಳಿಯುವಂತಾಗಿದೆ. ಕರಾವಳಿಯಲ್ಲಿ ಪಕ್ಷವನ್ನು ಮರಳಿ ಸಂಘಟಿಸುವುದಕ್ಕಾಗಿ ನಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕಿದೆ’ ಎಂದರು.
‘ನನ್ನ ಅಧ್ಯಕ್ಷಾವಧಿಯಲ್ಲಿ ಕರಾವಳಿಯಲ್ಲಿ ಸಾಮರಸ್ಯ ಕೆಟ್ಟು ಹೋಗಿರುವುದನ್ನು ಅರಿತು, ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಉಳ್ಳಾಲದಿಂದ ಮಲ್ಪೆಯವರೆಗೆ ಸಾಮರಸ್ಯದ ನಡಿಗೆ ನಡೆಸಿದ್ದೇನೆ. ಆದರೆ, ಇದಕ್ಕೆ ನಾಯಕರಾದ ಆಸ್ಕರ್ ಫೆರ್ನಾಂಡೀಸ್ ಹಾಗೂ ಜನಾರ್ದನ ಪೂಜಾರಿ ಪಾದಯಾತ್ರೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಆದರೂ ಯಾರ ಮಾತನ್ನೂ ಕೇಳದೆ ಪಾದಯಾತ್ರೆ ನಡೆಸಿದ್ದೇನೆ. ಪಾದಾಯಾತ್ರೆ ಬೇಡ ಎಂದ ಜರ್ನಾರ್ದನ ಪೂಜಾರಿ ಅವರು, ಪಾದಯಾತ್ರೆಗೆ ಚಾಲನೆ ನೀಡುವ ದಿನ ಮುಂದಿನ ಸಾಲಿನಲ್ಲಿ ನಿಂತು ನನ್ನನ್ನು ಬೆನ್ನುತಟ್ಟಿದರು. ಈ ನಡಿಗೆ ಕಾಂಗ್ರೆಸ್ ಅಂದು ವಿಶೇಷ ಬಲ ತುಂಬಿ, 13ಕ್ಕೆ 11 ಕ್ಷೇತ್ರಗಳಲ್ಲಿ ಗೆಲುವು ತಂದುಕೊಟ್ಟಿತ್ತು. ಅದೇ ಮಾದರಿಯಲ್ಲಿ ಕರಾವಳಿಯಲ್ಲಿ ಮತ್ತೆ ಜನರನ್ನು ಸಂಘಟಿಸಬೇಕಿದೆ’ ಎಂದರು.
ಸರ್ಕಾರದ ಪ್ರಣಾಳಿಕೆಯಂತೆ ಜನಪರ ಆಡಳಿತ ಕೊಡುತ್ತಾ ಇದ್ದೇವೆ. ಬಡತನ, ಶೋಷಿತರ ಪರವಾಗಿದೆ ಕಾಂಗ್ರೆಸ್. ಗ್ಯಾರಂಟಿಗಳು ಪಕ್ಷಾತೀತವಾಗಿದೆ ಎಂದು ಗೃಹ ಸಚಿವರು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ ಮಾತನಾಡಿ, ‘ಸೌಹಾರ್ದ ಬಿಂಬಿಸುವ ಕಾರ್ಯ ಪರಮೇಶ್ವರ್ ಅವರ ಅವಧಿಯಲ್ಲಿ ಮಾಡಿದ್ದಾರೆ. ಸಂಯಮವಿದ್ದವರಿಗೆ ಅಧಿಕಾರ ಬರಲು ಸಾಧ್ಯ. ಗೃಹ ಸಚಿವರ ಭೇಟಿ ಕಾರ್ಯಕರ್ತರಿಗೆ ಉತ್ಸಾಹ ತಂದಿದೆ. ಹಲವು ವರ್ಷಗಳಿಂದ ಕಾಂಗ್ರೆಸ್ ಕೈತಪ್ಪಿ ಹೋಗಿದ್ದ ಅಧಿಕಾರವನ್ನು 2023ರಲ್ಲಿ ಮರಳಿ ತಂದು ಕೊಡುವ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅದೃಷ್ಟವಂತ ಅಧ್ಯಕ್ಷರೆಂಬ ಹೆಗ್ಗಳಿಕೆಯಿದೆ. ಅವರ ಆಗಮನ ಮುಂದಿನ ದಿನಗಳಲ್ಲಿ ಕಾಪು ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಉಡುಪಿ ಜಿಲ್ಲೆಗೂ ಅದೃಷ್ಟ ತಂದು ಕೊಡಲಿದೆ’ ಎಂದರು.
ಕಾಪು ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪಕ್ಷದ ಮುಖಂಡರಾದ ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ನವೀನ್ ಚಂದ್ರ ಶೆಟ್ಟಿ, ಮುನೀರ್, ಹರಿಪ್ರಸಾದ್ ರೈ, ಕಾಪು ದಿವಾಕರ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲು, ಶಾಂತಲತಾ ಶೆಟ್ಟಿ, ಮಹಮ್ಮದ್ ನಿಯಾಜ್, ಅನಿಲ್ ಕುಮಾರ್, ಪ್ರಶಾಂತ್ ಜತ್ತನ್ನ ಇದ್ದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.