
ಉಡುಪಿ: ‘ಮಹಾತ್ಮ ಗಾಂಧಿ ವಿಚಾರಧಾರೆಗಳನ್ನು, ಅವರು ಪ್ರತಿಪಾದಿಸಿದ್ದ ಸೈದ್ಧಾಂತಿಕ ನಿಲುವುಗಳನ್ನು ಕಾರ್ಯಕರ್ತರಿಗೆ ಎಲ್ಲಿಯವರೆಗೆ ತಲುಪಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಕಾಂಗ್ರೆಸ್ ಕಟ್ಟಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಗರದ ಅಜ್ಜರಕಾಡಿನ ಪುರಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಮಹಾತ್ಮ ಗಾಂಧಿ ಅವರ ಸೈದ್ಧಾಂತಿಕ ನಿಲುವು ಮನುಕುಲಕ್ಕೆ ಅಗತ್ಯ. ಆದರೆ ಬಿಜೆಪಿ ಸರ್ಕಾರ ಗಾಂಧಿ ಪಠ್ಯವನ್ನೇ ತೆಗೆದಿದೆ. ಗಾಂಧಿ, ಅಂಬೇಡ್ಕರ್ ವಿಚಾರಧಾರೆಗಳನ್ನು ಜನರಿಗೆ ತಲುಪಿಸಬೇಕು. ನಮ್ಮ ಭಗವದ್ಗೀತೆ ಎಂದರೆ ಅದು ಸಂವಿಧಾನ’ ಎಂದರು.
‘ಮಹಾತ್ಮ ಗಾಂಧಿ ಈ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಆದರ್ಶ ವ್ಯಕ್ತಿ. ತಾವು ಹೇಳಿದ ವಿಚಾರಗಳನ್ನು ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಇಂದಿಗೂ ಅವರ ಪ್ರತಿಮೆ 170 ದೇಶಗಳಲ್ಲಿವೆ’ ಎಂದು ಹೇಳಿದರು.
‘ಸುಳ್ಳು ಕಥೆಗಳನ್ನು ಬಿಜೆಪಿ ದೇಶದಾದ್ಯಂತ ಹಂಚಿಕೊಳ್ಳುತ್ತಿದೆ. ಆ ಕಥೆಗಳಿಗೆ ಯಾವ ಐತಿಹಾಸಿಕ ದಾಖಲೆಗಳೂ ಇಲ್ಲ. ಗಾಂಧಿ, ನೆಹರೂ ಬಗೆಗಿನ ಮಾಹಿತಿಯನ್ನು ಹಾಗೂ ದೇಶದ ಇತಿಹಾಸವನ್ನು ವಿರೂಪಗೊಳಿಸಿ ಪ್ರಚಾರಪಡಿಸಲಾಗುತ್ತಿದೆ. ಬಿಜೆಪಿ ದೇಶ ಕಟ್ಟುತ್ತಿಲ್ಲ ಬದಲಾಗಿ ಧರ್ಮ, ಜಾತಿ ಕಟ್ಟುತ್ತಿದೆ. ಅದರಿಂದ ದೇಶಕ್ಕೆ ಉಪಯೋಗವಿಲ್ಲ’ ಎಂದರು.
‘ದೇಶ ವಿಭಜನೆ ಮಾಡಲು ಗಾಂಧಿ ಕಾರಣ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ದೇಶದಲ್ಲಿ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಯಾವಾಗ ಆರಂಭವಾಯಿತೋ ಅಂದಿನಿಂದ ವಿಭಜನೆ ಆರಂಭವಾಯಿತು. ಅದಕ್ಕೆ ಗಾಂಧಿ ಕಾರಣರಲ್ಲ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ‘ಸಾರ್ವಭೌಮತೆ ಎಂದರೆ ನಮ್ಮ ತೀರ್ಮಾನಗಳನ್ನು ನಾವೇ ತೆಗೆದುಕೊಳ್ಳುವುದು. ಆದರೆ ಇಂದು ನಮ್ಮ ದೇಶದ ನಿರ್ಧಾರವನ್ನು ಬೇರೆ ದೇಶದವರು ತೆಗೆದುಕೊಳ್ಳುವಂತಾಗಿದೆ. ಭಾರತ ಪಾಕಿಸ್ತಾನ ನಡುವಿನ ಯುದ್ದವನ್ನು ನಾನೇ ನಿಲ್ಲಿಸಿದ್ದು ಎಂದು ಟ್ರಂಪ್ ಹೇಳುತ್ತಿರುವುದು ಅದಕ್ಕೆ ಉದಾಹರಣೆ’ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಮುನೀರ್ ಜನ್ಸಾಲೆ, ಸುಧೀರ್ ಮರೊಳ್ಳಿ, ಮಂಜುನಾಥ್ ಪೂಜಾರಿ, ಉದಯ್‌ಕುಮಾರ್ ಶೆಟ್ಟಿ ಮುನಿಯಾಲು, ಹರೀಶ್ ಕಿಣಿ, ವೆರೋನಿಕಾ ಕರ್ನೆಲಿಯೊ, ಜ್ಯೋತಿ ಹೆಬ್ಬಾರ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಭಾಗವಹಿಸಿದ್ದರು.
ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ಪ್ರಜಾಪ್ರಭುತ್ವ ಇಲ್ಲದಿದ್ದರೆ ನಮ್ಮ ದೇಶದ ಪರಿಸ್ಥಿತಿಯೂ ನೆರೆಯ ದೇಶಗಳಂತೆ ಹದಗೆಡುತ್ತಿತ್ತು. ಸಂವಿಧಾನದ ರಕ್ಷಣೆ ನಮ್ಮ ಕರ್ತವ್ಯ. ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.– ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯ
‘ಸಂವಿಧಾನ ಪಠ್ಯಕ್ಕೂ ಬರಲಿ’
ಸಂವಿಧಾನದ ಕಿರುಪರಿಚಯ ಶಿಕ್ಷಣದ ಮೂಲಕ ಆಗಬೇಕು. ಆಗ ಮುಂದಿನ ಪೀಳಿಗೆಗೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯ. ಪಠ್ಯಪುಸ್ತಕಕ್ಕೂ ಸಂವಿಧಾನದ ಪರಿಚಯವಾಗಬೇಕು ಎಂದು ಚಲನಚಿತ್ರ ನಿರ್ದೇಶಕ ಎಸ್. ನಾರಾಯಣ್ ಹೇಳಿದರು. ಕಾಂಗ್ರೆಸ್ ಎಂದರೆ ಸಮಗ್ರ ಭಾರತದ ಶಕ್ತಿ. ಇದು ಸ್ವಾತಂತ್ರ್ಯಕ್ಕೋಸ್ಕರ ಹುಟ್ಟಿಕೊಂಡ ಪಕ್ಷ ಉಳಿದವು ಸ್ವಾರ್ಥಕ್ಕಾಗಿ ಹುಟ್ಟಿಕೊಂಡವು. ಆದ್ದರಿಂದ ಕಾಂಗ್ರೆಸ್ ಅನ್ನು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ. ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು. ತಪ್ಪುಗಳಾಗಿದ್ದರೆ ಅದನ್ನು ತಿದ್ದಿಕೊಂಡು ಕೈತಪ್ಪಿದ ಕ್ಷೇತ್ರಗಳಲ್ಲಿ ಪಕ್ಷ ಮತ್ತೆ ಗೆಲ್ಲುವಂತೆ ಶ್ರಮಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.