ADVERTISEMENT

ಕುಂದಾಪುರ: ವಿನಾಯಕ ದೇವಸ್ಥಾನಗಳಲ್ಲಿ ಸಂಭ್ರಮದ ಚೌತಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:29 IST
Last Updated 8 ಸೆಪ್ಟೆಂಬರ್ 2024, 13:29 IST
ಕುಂದಾಪುರ ಸಮೀಪದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶನಿವಾರ  ವಿನಾಯಕ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ಕುಂದಾಪುರ ಸಮೀಪದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶನಿವಾರ  ವಿನಾಯಕ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.   

ಕುಂದಾಪುರ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕುಂಭಾಸಿ ಆನೆಗುಡ್ಡೆ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನ, ಗುಡ್ಡಟ್ಟು ವಿನಾಯಕ ದೇವಸ್ಥಾನ ಸೇರಿದಂತೆ ವಿವಿಧ ಗಣಪತಿ ದೇವಸ್ಥಾನಗಳಲ್ಲಿ ಶನಿವಾರ ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆದವು.

ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು ಸರದಿ ಸಾಲಿನಲ್ಲಿ ಬಂದು ಸಿದ್ಧಿ ವಿನಾಯಕನ ದರ್ಶನ ಪಡೆದುಕೊಂಡರು. ನಿರ್ಮಾಲ್ಯ ವಿಸರ್ಜನಾ ಪೂಜೆ, ಪಂಚಾಮೃತ ಸಹಿತ ಉಪನಿಷತ್ ಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ, ಸತ್ಯ ಗಣಪತಿ ವೃತ ಸಹಿತ ಮಹಾಪೂಜೆ, ಮೂಡು ಗಣಪತಿ, ಸಾಮೂಹಿಕ ರಂಗಪೂಜೆ, ಅಷ್ಟೋತ್ತರ ಸೇವೆ, ಕಡುಬು ಸೇವೆ, ಅನ್ನ ಸಂತರ್ಪಣೆ ನಡೆಯಿತು. ಆನೆಗುಡ್ಡೆಯಲ್ಲಿ ರಾತ್ರಿ ದೇವರ ಸ್ವರ್ಣ ಪಲ್ಲಕ್ಕಿ ಉತ್ಸವ ನಡೆಯಿತು.

ವಿಶೇಷ ಪ್ರಸಾದ ವಿತರಣೆ: ಕುಂಭಾಸಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ನಡೆದ 1008 ತೆಂಗಿನಕಾಯಿಯ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗಕ್ಕೆ ನೂರಾರು ತೆಂಗಿನ ಕಾಯಿಯ ಪಂಚಕಜ್ಜಾಯ, ಕಡಲೆ, ಸಕ್ಕರೆ, ಎಳ್ಳು ಸೇರಿದಂತೆ 5 ವಿವಿಧ ದ್ರವ್ಯಗನ್ನೊಳಗೊಂಡ ಕ್ವಿಂಟಲ್ ತೂಕದ ಪಂಚಕಜ್ಜಾಯ, ಅಷ್ಟ ದ್ರವ್ಯದ ಪಂಚಕಜ್ಜಾಯ, ಸಾವಿರಾರು ಮೂಡೆ (ಕೊಟ್ಟೆ ಕಡುಬು ಪ್ರಸಾದ), ಅಪ್ಪ ಮೊದಕಗಳಲ್ಲದೆ ವಿಶೇಷ ಖಾದ್ಯಗಳನ್ನು ದೇವರಿಗೆ ಸಮರ್ಪಿಸಲಾಯಿತು. ಪರ್ಯಾಯ ಅರ್ಚಕರ ನೇತೃತ್ವದಲ್ಲಿ ಚೌತಿ ಹಬ್ಬದ ವಿಶೇಷವಾಗಿ 21 ಬಗೆಯ ವಿವಿಧ ಪಂಚಖಾದ್ಯಗಳನ್ನು ದೇವರಿಗೆ ಅರ್ಪಿಸಿ ಭಕ್ತರಿಗೆ ವಿತರಿಸಲಾಯಿತು.

ADVERTISEMENT

ಆನೆಗುಡ್ಡೆ ವಿನಾಯಕ ದೇವಳಕ್ಕೆ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಶಾಸಕ ಯಶ್‌ಪಾಲ್‌ ಸುವರ್ಣ, ಮಾಜಿ ಶಾಸಕ ಗೋಪಾಲ ಪೂಜಾರಿ, ಉದ್ಯಮಿಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ಮೊಳಹಳ್ಳಿ ದಿನೇಶ್ ಹೆಗ್ಡೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ರಮಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ. ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ನಿವೃತ್ತ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಆನುವಂಶಿಕ ಮೊಕ್ತೇಸರರಾದ ಕೆ. ನಿರಂಜನ್ ಉಪಾಧ್ಯಾಯ, ಕೆ. ಪದ್ಮನಾಭ ಉಪಾಧ್ಯಾಯ, ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್, ಅರ್ಚಕರು, ಸಿಬ್ಬಂದಿ ಇದ್ದರು.

ವಿವಿಧ ಕಡೆಗಳಲ್ಲಿ ಚೌತಿ ಆಚರಣೆ: ಹಟ್ಟಿಯಂಗಡಿಯ ಸಿದ್ಧಿ ವಿನಾಯಕ ದೇವಸ್ಥಾನ, ಗುಡ್ಡೆಟ್ಟು ವಿನಾಯಕ ದೇವಸ್ಥಾನ, ಕುಂದೇಶ್ವರ ದೇವಸ್ಥಾನ, ಸೀತಾರಾಮಚಂದ್ರ ದೇವಸ್ಥಾನ, ನಾರಾಯಣ ಗುರು ಸಿದ್ಧಿ ವಿನಾಯಕ ದೇವಸ್ಥಾನ, ನಾವಡರ ಕೇರಿ ವಿನಾಯಕ ದೇವಸ್ಥಾನ, ವ್ಯಾಸರಾಜ ಮಠ, ಕೊಡ್ಲಾಡಿ ಗಣಪತಿ ದೇವಸ್ಥಾನ, ವಂಡ್ಸೆ–ನೆಂಪು, ಮಲ್ಯಾಡಿಯ ಗಣಪತಿ ದೇವಸ್ಥಾನಗಳಲ್ಲಿ ಚೌತಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕುಂದಾಪುರ, ಕೋಟೇಶ್ವರ, ಕೋಡಿ, ತೆಕ್ಕಟ್ಟೆ, ಉಪ್ಪಿನಕುದ್ರು, ತಲ್ಲೂರು, ಹೆಮ್ಮಾಡಿ, ಕಟ್‌ಬೇಲ್ತೂರು, ಬಾಳಿಕೇರಿ, ಕಣ್ಣುಕೆರೆ, ಕೆದೂರು, ಬೀಜಾಡಿ, ಹುಣ್ಸೆಮಕ್ಕಿ, ಗಂಗೊಳ್ಳಿ, ನಾಡಾ, ಗುಡ್ಡೆ ಹೋಟೇಲ್, ಪಡುಕೋಣೆ ಮುಂತಾದ ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು.

ಕುಂದಾಪುರ ಸಮೀಪದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆಗೊಂಡ ಗಣಪತಿ.
ಕುಂದಾಪುರ ಸಮೀಪದ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ವಿನಾಯಕ ಚತುರ್ಥಿ ಹಬ್ಬದಂದು ಲೋಕ ಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.