ADVERTISEMENT

ಪತ್ನಿ, ಮೂವರು ಮಕ್ಕಳನ್ನು ಕೊಂದ ಪಾಪಿ ಉಡುಪಿಯಲ್ಲಿ ಸಿಕ್ಕಿಬಿದ್ದ

ಗಾಜಿಯಾಬಾದ್‌ನಿಂದ ಬಂದಿದ್ದ ಆರೋಪಿ ಮಣಿಪಾಲ ಪೊಲೀಸರಿಗೆ ಶರಣಾಗತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 16:50 IST
Last Updated 24 ಏಪ್ರಿಲ್ 2019, 16:50 IST

ಉಡುಪಿ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈಚೆಗೆ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿ ಮಂಗಳವಾರ ಮಣಿಪಾಲ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಆರೋಪಿ ಗಾಜಿಯಾಬಾದ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಸುಮಿತ್ ಕುಮಾರ್ ಎನ್ನಲಾಗಿದೆ. ಮಣಿಪಾಲ ಪೊಲೀಸರು ಆರೋಪಿಯನ್ನು ಗಾಜಿಯಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ಕರೆದೊಯ್ಯಲಾಗಿದೆ.

ಪ್ರಕರಣದ ಹಿನ್ನೆಲೆ:

ADVERTISEMENT

ಸುಮಿತ್ ಕುಮಾರ್ ವಾರದ ಹಿಂದೆ ಪತ್ನಿ ಅಂಶುಬಾಲಾ, ಮಕ್ಕಳಾದ ಪ್ರತಿಮೇಶ್‌, ಆಕೃತಿ, ಅರವ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಬಳಿಕ ಕುಟುಂಬದ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಕೊಲೆ ಮಾಡಿರುವ ಸಂದೇಶ ಕಳುಹಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದ.‌

ಕೊಲೆ ವಿಚಾರ ತಿಳಿಯುತ್ತಿದ್ದಂತೆ ಗಾಜಿಯಾಬಾದ್ ಪೊಲೀಸರು ಆರೋಪಿಯ ಪತ್ತೆಗೆ 3 ತಂಡಗಳನ್ನು ರಚಿಸಿದ್ದರು. ಸುಮಿತ್‌ನ ಮೊಬೈಲ್‌ ಕರೆಯ ಜಾಡು ಹಿಡಿದು ಬೆನ್ನಟ್ಟಿದ್ದರು. ಈ ಮಧ್ಯೆ ಗಾಜಿಯಾಬಾದ್‌ನಿಂದ ಉಡುಪಿ ರೈಲು ನಿಲ್ದಾಣಕ್ಕೆ ಬಂದಿಳಿದ ಸುಮಿತ್‌ಗೆ ಪಾಪಪ್ರಜ್ಞೆ ಕಾಡಿದೆ. ನೇರವಾಗಿ ಮಣಿಪಾಲ ಠಾಣೆಗೆ ಬಂದು ಕೊಲೆಮಾಡಿರುವ ವಿಚಾರ ತಿಳಿಸಿ ಶರಣಾಗಿದ್ದಾನೆ.

ಇದೇವೇಳೆಗೆ ಆರೋಪಿಯನ್ನು ಹುಡುಕಿಕೊಂಡು ಉಡುಪಿಗೆ ಬಂದಿದ್ದ ಗಾಜಿಯಾಬಾದ್ ಪೊಲೀಸರು ಮಣಿಪಾಲ ಪೊಲೀಸರಿಗೆ ಕರೆ ಮಾಡಿ ಆರೋಪಿಯ ಬಂಧನಕ್ಕೆ ನೆರವು ಕೋರಿದ್ದಾರೆ. ಆರೋಪಿ ಶರಣಾಗಿರುವ ವಿಚಾರ ತಿಳಿದು ಆತನನ್ನು ಬಂಧಿಸಿ ಕರೆದೊಯ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.