ಉಡುಪಿ: ಚಂಡಿಘಡದಿಂದ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿಯನ್ನು ಮಂಗಳವಾರ ಉಡುಪಿ ರೈಲು ನಿಲ್ದಾಣದಲ್ಲಿ ರೈಲ್ವೆ ಸುರಕ್ಷತಾ ಪಡೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಚಂಡಿಘಡದಲ್ಲಿ ಬಾಲಕಿ ಅಪಹರಣಕ್ಕೊಳಗಿರುವ ದೂರು ದಾಖಲಾಗಿದ್ದು, ಅಲ್ಲಿನ ಪೊಲೀಸರು ಫೋನ್ ಮೂಲಕ ಸಂಪರ್ಕಿಸಿ ಬಾಲಕಿಯ ಪತ್ತೆಗೆ ನೆರವು ಕೋರಿದ್ದರು. ಅದರಂತೆ, ಎಎಸ್‌ಐಪಿಎಫ್ ಸುಧೀರ್ ಶೆಟ್ಟಿ ಅವರ ತಂಡ ಪ್ಲಾಟ್‌ಫಾರಂನಲ್ಲಿ ಶೋಧ ಕಾರ್ಯ ನಡೆಸಿದಾಗ ಪ್ರಮುಖ ದ್ವಾರದಲ್ಲಿ ಬಾಲಕಿ ಹಾಗೂ 26 ವರ್ಷದ ಯುವಕನೊಬ್ಬ ಸಿಕ್ಕಿಬಿದ್ದ.
ನಂತರ ಬಾಲಕಿಯನ್ನು ವಿಚಾರಿಸಿದಾಗ 10 ದಿನಗಳ ಹಿಂದೆ ಪೋಷಕರಿಗೆ ತಿಳಿಸದೆ ಮನೆಬಿಟ್ಟು ಬಂದಿರುವುದಾಗಿ ತಿಳಿಸಿದರು. ಆಕೆಯ ಜತೆಗಿದ್ದ ಯುವಕ ಉತ್ತರ ಪ್ರದೇಶದ ಕೊಟ್ವಾಲಿಯ ಮಹಮ್ಮದ್ ಸಾಧಿಕ್ ಎಂದು ತಿಳಿದುಬಂತು. ಕೂಡಲೇ ಚಂಡಿಘಡ ಪೊಲೀಸರಿಗೆ ವಿಷಯ ತಿಳಿಸಿ ಇಬ್ಬರನ್ನು ಅವರ ವಶಕ್ಕೆ ಒಪ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.