ADVERTISEMENT

ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ದೇವರೇ ಅವಕಾಶ ಕೊಡಲಿಲ್ಲ: ಪ್ರಮೋದ್ ಮಧ್ವರಾಜ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 12:29 IST
Last Updated 17 ಡಿಸೆಂಬರ್ 2018, 12:29 IST

ಉಡುಪಿ: ‘ಶಾಸಕ, ಸಚಿವನಾಗಿದ್ದ ಅವಧಿಯಲ್ಲಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ಅವಕಾಶವೇ ಸಿಗಲಿಲ್ಲ. ಬಹುಶಃ ದೇವರೇ ಭಾಗವಹಿಸುವುದಕ್ಕೆ ಅವಕಾಶ ಕೊಡಲಿಲ್ಲ ಎನಿಸುತ್ತಿದೆ’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಡಿ.10ರಂದು ಬ್ರಹ್ಮಾವರದ ಪೇತ್ರಿ ಸೇಂಟ್ ಪೀಟರ್ಸ್ ಚರ್ಚ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಮೋದ್‌ ಮಧ್ವರಾಜ್‌ ಈ ಹೇಳಿಕೆ ನೀಡಿದ್ದರು. ‘ಟಿಪ್ಪು ಸುಲ್ತಾನ್ ಸೈನ್ಯ ಪೇತ್ರಿ ಚರ್ಚ್‌ ಮೇಲೆ ದಾಳಿ ಮಾಡಿ ನಾಶಮಾಡಿತ್ತು ಎಂಬ ಅಂಶ ಇತಿಹಾಸದಲ್ಲಿದೆ. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದು ಸರಿಯೋ ತಪ್ಪೊ ಗೊತ್ತಿಲ್ಲ. ಆದರೆ, ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ’ ಎಂದು ಮಧ್ವರಾಜ್ ಹೇಳಿರುವುದು ವಿಡಿಯೋದಲ್ಲಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾದಾಗ, ಪ್ರಮೋದ್ ಮಧ್ವರಾಜ್ ಅವರು ಬಹಿರಂಗ ಬೆಂಬಲ ನೀಡಿರಲಿಲ್ಲ. 2015ರಿಂದ 2017ರವರೆಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಟಿಪ್ಪು ಜಯಂತಿಗಳಲ್ಲಿ ಅವರು ಭಾಗವಹಿಸಿರಲಿಲ್ಲ. ಸರ್ಕಾರದ ಸೂಚನೆ ಇದ್ದರೂ ಟಿಪ್ಪು ಜಯಂತಿಗೆ ಗೈರಾದ ಮಧ್ವರಾಜ್ ಅವರ ನಡೆಗೆ ಪಕ್ಷದಲ್ಲೇ ಅಪಸ್ವರಗಳು ಕೇಳಿಬಂದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.