ADVERTISEMENT

ಉಡುಪಿ: ಜಿಲ್ಲೆಯಾದ್ಯಂತ ಶುಭ ಶುಕ್ರವಾರ ಆಚರಣೆ

ಯೇಸುವಿನ ಶಿಲುಬೆಯ ಹಾದಿ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 3:23 IST
Last Updated 3 ಏಪ್ರಿಲ್ 2021, 3:23 IST
ಕ್ರೈಸ್ತರ ಪವಿತ್ರ ಆಚರಣೆಯಾದ ಶುಭ ಶುಕ್ರವಾರ (ಗುಡ್ ಫ್ರೈಡೆ) ದಿನವನ್ನು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ, ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಕ್ರೈಸ್ತರ ಪವಿತ್ರ ಆಚರಣೆಯಾದ ಶುಭ ಶುಕ್ರವಾರ (ಗುಡ್ ಫ್ರೈಡೆ) ದಿನವನ್ನು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ, ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.   

ಉಡುಪಿ: ಕ್ರೈಸ್ತರ ಪವಿತ್ರ ಆಚರಣೆಯಾದ ಶುಭ ಶುಕ್ರವಾರ (ಗುಡ್ ಫ್ರೈಡೆ) ದಿನವನ್ನು ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ, ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಚರ್ಚ್‌ಗಳಲ್ಲಿ ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು.‌

ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್‌ ಚರ್ಚ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಢ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭ ಚರ್ಚ್‌ನ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರುಗಳಾದ ಕೆನ್ಯೂಟ್, ಕಲ್ಯಾಣಪುರ ಪಿಲಾರ್ ಸಭೆಯ ಬ್ರಾಯನ್ ಸಿಕ್ವೇರಾ ಉಪಸ್ಥಿತರಿದ್ದರು.

ಯೇಸುವಿಗೆ ಮರಣ ದಂಡನೆ ವಿಧಿಸುವ ದೃಶ್ಯ, ಹೆಗಲಿಗೆ ಶಿಲುಬೆ ಏರಿಸುವುದು, ಯೇಸು ಶಿಲುಬೆಯಡಿ ಬೀಳುವುದು, ಸಿರೆನಾದ ಸೈಮನ್‌ ಯೇಸುವಿಗೆ ಶಿಲುಬೆ ಹೊರಲು ಸಹಾಯ ಮಾಡುವುದು, ವೆರೊನಿಕಾ ಯೇಸುವಿನ ಮುಖ ಒರೆಸುವುದು, ಯೇಸುವಿನ ದೇಹದ ವಸ್ತ್ರ ತೆಗೆದು ನಗ್ನ ಮಾಡುವುದು, ಅಂತಿಮವಾಗಿ ಶಿಲುಬೆಗೇರಿಸುವುದು, ಪ್ರಾಣ ಅರ್ಪಣೆ, ಪಾರ್ಥಿವ ಶರೀರವನ್ನು ಕೆಳಗಿಳಿಸುವ ಪ್ರಕ್ರಿಯೆ, ಅಂತ್ಯ ಸಂಸ್ಕಾರ ಹೀಗೆ 14 ಹಂತಗಳ ಘಟನಾವಳಿಗಳನ್ನು ಒಳಗೊಂಡ ಶಿಲುಬೆಯ ಹಾದಿ ಪ್ರಸ್ತುತಪಡಿಸಲಾಯಿತು.

ಚರ್ಚ್‌ಗಳಲ್ಲಿ ಕ್ರೈಸ್ತರು ಉಪವಾಸ, ಧ್ಯಾನ, ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಮರಣದ ಹಿನ್ನೆಲೆಯಲ್ಲಿ ಎಲ್ಲೆಡೆ ಮೌನ ಆವರಿಸಿತ್ತು. ದೇವಾಲಯಗಳಲ್ಲಿ ಪವಿತ್ರ ಬೈಬಲ್‌ ವಾಚನ, ಪ್ರವಚನ ನಡೆಯಿತು. ಚರ್ಚ್‌ನಲ್ಲಿ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವೃತ್ತಾಂತ ವಾಚಿಸಿದರು.

ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಭಕ್ತರು ನಮನ ಸಲ್ಲಿಸಿ, ಬಡವರಿಗೆ ಕೂಡಿಟ್ಟ ಹಣವನ್ನು ಹಂಚಿದರು. ಕೋವಿಡ್ ಮಾರ್ಗಸೂಚಿಯಂತೆ ಧಾರ್ಮಿಕ ವಿಧಿವಿಧಾನಗಳಲ್ಲಿ ಅಂತರ ಕಾಪಾಡಿಕೊಳ್ಳಲಾಯಿತು. ಭಕ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.