ADVERTISEMENT

ಗ್ಯಾರಂಟಿ ನೀಡದೆ ಜನರನ್ನು ವಂಚಿಸುತ್ತಿರುವ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 14:32 IST
Last Updated 31 ಜನವರಿ 2024, 14:32 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಕುಂದಾಪುರ: ಘೋಷಣೆಗಳ ಮೂಲಕ ಕಾಲಾಹರಣ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಗ್ಯಾರಂಟಿಗಳನ್ನು ಸರಿಯಾಗಿ ನೀಡದೆ ಜನರನ್ನು ವಂಚಿಸುತ್ತಿದೆ. ಅಧಿಕಾರಕ್ಕೆ ಬಂದು 8 ತಿಂಗಳಾದರೂ, 8 ಕಿ.ಮೀ. ರಸ್ತೆಯನ್ನೂ ಮಾಡದ ಸರ್ಕಾರದ ಇದ್ದರೆ ಅದು ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಲೇವಡಿ ಮಾಡಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಚಿತ ವಿದ್ಯುತ್ 200 ಯುನಿಟ್ ಘೋಷಣೆ ಮಾಡಿ, ಕೇವಲ 50 ಯುನಿಟ್ ನೀಡುತ್ತಿದ್ದಾರೆ. 9.5 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮಿ ಪ್ರಥಮ ಕಂತೇ ಬಂದಿಲ್ಲ. 40 ಲಕ್ಷ ಮಂದಿ ಯುವನಿಧಿಗೆ ಅರ್ಹರಾಗಿದ್ದರೂ, ಒಂದೇ ವರ್ಷದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ವೆಚ್ಚವನ್ನು ₹10 ಸಾವಿರ ಕೋಟಿ ಬದಲು ₹700 ಕೋಟಿ ನೀಡಲಾಗುತ್ತಿದೆ. ಮತಗಳಿಕೆಗಾಗಿ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್, ಅಭಿವೃದ್ಧಿ ಕಾರ್ಯ ಸ್ಥಗಿತಗೊಳಿಸಿದ ಸರ್ಕಾರ ಎಂಬ ಅಪಕೀರ್ತಿಯ ಗ್ಯಾರಂಟಿಗೆ ಭಾಜನವಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಟಿಪ್ಪು ಜಯಂತಿ ಆಚರಿಸುವ ಸರ್ಕಾರ, ಅನುಮತಿ ಪಡೆದು ಹಾಕಿದ ಓಂಕಾರದ ಕೇಸರಿ ಧ್ವಜವನ್ನು ಕಾರಣವಿಲ್ಲದೆ ಇಳಿಸುವ ಮೂಲಕ ಉದ್ಧಟತನ ತೋರಿದೆ. ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಈ ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ. ಇದರ ಪರಿಣಾಮ ಮಂಡ್ಯದ ಮನೆ ಮನೆಗಳಲ್ಲಿ ಕೇಸರಿ ಧ್ವಜ ಹಾರಾಡಲಿದ್ದು, ಮುಂದೆ ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆಯಿದೆ ಎಂದರು.

ADVERTISEMENT

ಕರಾವಳಿ ಮಾದರಿಯಲ್ಲಿ ಮಂಡ್ಯ ಕೇಸರಿ ಪ್ರಯೋಗಶಾಲೆಯಾಗಲಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರಾವಳಿಯಲ್ಲಿ ಲಾಗಾಯ್ತಿನಿಂದಲೂ ರಾಷ್ಟ್ರ ಮೊದಲು ಎನ್ನುವ ಸಿದ್ಧಾಂತದವರೇ ಇರುವುದರಿಂದ ಇಲ್ಲಿ ರಾಷ್ಟ್ರಪರ ಚಿಂತನೆ ಇದೆ. ರಾಷ್ಟ್ರಾದ್ಯಂತ ಈ ಚಿಂತನೆ ಹಬ್ಬಿದೆ. ಮುಖ್ಯಮಂತ್ರಿ, ‘ನಾನೂ ಹಿಂದೂ, ಜೈಶ್ರೀರಾಮ್’ ಎನ್ನುವ ಘೋಷಣೆ ಕೂಗಿ ಇತ್ತ ಕೇಸರಿ ಧ್ವಜ ಇಳಿಸಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದು, ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದಾರೆ ಎಂದು ಪೂಜಾರಿ ಟೀಕಿಸಿದರು.

ಜಾತಿಗಣತಿಗೆ ನಮ್ಮ ವಿರೋಧ ಇಲ್ಲ. ಆದರೆ ₹200 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದ ಕಾಂತರಾಜು ವರದಿ ಸ್ವೀಕಾರಕ್ಕೆ ಲಕ್ಷಾಂತರ ಜನ ಸೇರಿಸಬೇಕಾದ, ತನ್ನನ್ನು ವೈಭವೀಕರಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಸಿದ್ದರಾಮಯ್ಯ ಸರ್ಕಾರವೇ ಕಾಂತರಾಜು ಆಯೋಗದ ನೇಮಕ ಮಾಡಿತ್ತು, ಆಗ ವರದಿಯನ್ನೇ ಪಡೆದಿರಲಿಲ್ಲ. ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದ್ದಾಗಲೂ ವರದಿ ಪಡೆಯಲಿಲ್ಲ. ಬಿಜೆಪಿ ಸರ್ಕಾರ ವರದಿ ಪಡೆಯಲು ಮುಂದಾದಾಗ ಅದರಲ್ಲಿ ಪದ ನಿಮಿತ್ತ ಕಾರ್ಯದರ್ಶಿಯ ಸಹಿಯೇ ಇರಲಿಲ್ಲ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗದಲ್ಲಿ ಪರಿಶೀಲಿಸಿ ನೀಡಿ ವರದಿ ನೀಡುವಂತೆ ಎಂದು ಕೇಳಿಕೊಳ್ಳಲಾಗಿತ್ತು. ಅವರು ವರದಿ ನೀಡುವ ವೇಳೆಗೆ ಸರ್ಕಾರದ ಅವಧಿ ಮುಗಿದಿತ್ತು ಎಂದರು.

ಮೋದಿ ಮತ್ತೊಮ್ಮೆ ಎಂಬ ಅಭಿಯಾನಕ್ಕೆ ಬಳ್ಳಾರಿಯಲ್ಲಿ ಚಾಲನೆ ನೀಡಲಾಗಿದೆ. ಗ್ರಾಮ ಚಲೋ ಮೂಲಕ ಬಿಜೆಪಿ ಕಾರ್ಯಕರ್ತರು ಜನರ ಮನೆಗಳಿಗೆ ತೆರಳಿ ಜನರ ಭಾವನೆ ಅರಿತುಕೊಳ್ಳಲಿದ್ದಾರೆ. ಸಾಮಾನ್ಯ ಜನರ ಬದುಕಿನಲ್ಲೂ ಬದಲಾವಣೆ ತಂದ ಮೋದಿ ಅವರ ಮೂಲಕ ಸಮೃದ್ಧ ಶಕ್ತಿಶಾಲಿ ಸ್ವಾಭಿಮಾನಿ ಭಾರತದ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.