ADVERTISEMENT

ವಸತಿಶಾಲೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ಇರಲಿ

ಶಾಲೆಗಳಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ಸಲ್ಲಿಸಿ: ಜಿಲ್ಲಾಧಿಕಾರಿ ಜಿ. ಜಗದೀಶ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 14:57 IST
Last Updated 29 ಜುಲೈ 2021, 14:57 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರ, ನಿಲಯ ಪಾಲಕರ, ಕಂಪ್ಯೂಟರ್ ಶಿಕ್ಷಕರ, ಪ್ರಥಮ ದರ್ಜೆ ಸಹಾಯಕರ ಸಭೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರ, ನಿಲಯ ಪಾಲಕರ, ಕಂಪ್ಯೂಟರ್ ಶಿಕ್ಷಕರ, ಪ್ರಥಮ ದರ್ಜೆ ಸಹಾಯಕರ ಸಭೆ ನಡೆಯಿತು.   

ಉಡುಪಿ: ಜಿಲ್ಲೆಯಲ್ಲಿರುವ ವಸತಿ ಶಾಲೆಗಳಿಗೆ ಸ್ಥಳೀಯ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ವಸತಿ ಶಾಲೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಕಚೇರಿ ಸಭಾಂಗಣದಲ್ಲಿ ಗುರುವಾರ 6ನೇ ತರಗತಿ ಪ್ರವೇಶ ಪರೀಕ್ಷೆ ಹಾಗೂ ವಸತಿಶಾಲೆಗಳ ನಿರ್ವಹಣೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರ, ನಿಲಯ ಪಾಲಕರ, ಕಂಪ್ಯೂಟರ್ ಶಿಕ್ಷಕರ, ಪ್ರಥಮ ದರ್ಜೆ ಸಹಾಯಕರ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾಗಾಂಧಿ ವಸತಿಶಾಲೆಗಳ 6ನೇ ತರಗತಿ ದಾಖಲಾತಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ. ಜಿಲ್ಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಸತಿಶಾಲೆಗಳ ಪ್ರಯೋಜನ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ವಸತಿಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಸರ್ಕಾರ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಶೂ, ಪಠ್ಯಪುಸ್ತಕ, ನೋಟ್‌ಪುಸ್ತಕಗಳನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿರುವುದು ಕಂಡುಬಂದಿದ್ದು, ಜಿಲ್ಲೆಯ ಸ್ಥಳೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಶಾಲೆಗಳಿಗೆ ದಾಖಲಾಗುವ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕ್ರಮವಹಿಸಿ ಎಂದರು.

6ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅಗತ್ಯ ಮಾರ್ಗದರ್ಶನವನ್ನು ನೀಡಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿದೇಶಕಿ ಅನಿತಾ ಮಡ್ಲೂರ್, ಬಿಸಿಎಂ ಅಧಿಕಾರಿ ದೇವೇಂದ್ರ ಬಿರಾದಾರ್, ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದಾದಾಪಿರ್, ಡಿಡಿಪಿಐ ಎನ್.ಎಚ್.ನಾಗೂರ, ಡಯಟ್ ಪ್ರಾಂಶುಪಾಲ ವೇದಮೂರ್ತಿ ಹಾಗೂ ಜಿಲ್ಲಾ ಸಮನ್ವಯಾಧಿಕಾರಿ ಚಂದ್ರಶೇಖರ ಇದ್ದರು.

ಎಲ್ಲೆಲ್ಲಿ ವಸತಿ ಶಾಲೆ

ಕಾರ್ಕಳ ತಾಕ್ಲೂಕಿನ ಮಿಯಾರು, ಕಾಪು ತಾಲ್ಲೂಕಿನ ಕಳತ್ತೂರು, ಉಡುಪಿ ತಾಲ್ಲೂಕಿನ ಹಿರೇಬೆಟ್ಟು, ಬ್ರಹ್ಮಾವರ ತಾಲ್ಲೂಕಿನ ಆರೂರು, ಕುಂದಾಪುರ ತಾಲ್ಲೂಕಿನ ಶಂಕರ ನಾರಾಯಣ, ಸಿದ್ದಾಪುರ, ಯಡ್ಯಾಡಿ-ಮತ್ಯಾಡಿ, ಬೈಂದೂರು ತಾಲ್ಲೂಕಿನ ಹೆರಂಜಾಲು ವಸತಿಶಾಲೆಗಳಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಸೆ.16 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.