ಶಿರ್ವ: ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತನ್ ಕುಮಾರ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.
ಕೆ.ಆರ್.ಪಾಟ್ಕರ್ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ರತನ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿ ಬೆಂಬಲಿತ ಶ್ರೀನಿವಾಸ ಶೆಣೈ ಸ್ಪರ್ಧಿಸಿದ್ದರು. ಕಾಂಗ್ರೆಸ್ ಬೆಂಬಲಿತ 19 ಮಂದಿ ಹಾಗೂ ಬಿಜೆಪಿ ಬೆಂಬಲಿತ 15 ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ರತನ್ ಕುಮಾರ್ ಶೆಟ್ಟಿ ಕಾಂಗ್ರೆಸ್ ಬೆಂಬಲಿತರ 19 ಮತ ಹಾಗೂ ಒಬ್ಬರು ಬಿಜೆಪಿ ಬೆಂಬಲಿತರ ಮತ ಸೇರಿ ಒಟ್ಟು 20 ಮತ ಪಡೆದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ 14 ಮತ ಪಡೆದರು. ರತನ್ ಕುಮಾರ್ ಶೆಟ್ಟಿ ಮೂರು ಬಾರಿ ಶಿರ್ವ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು, ಎರಡು ಬಾರಿ ಪದವು ವಾರ್ಡ್ ಸದಸ್ಯರಾಗಿದ್ದರು. ಪ್ರಸ್ತುತ ಕುಡ್ತ ಮಜಲು ವಾರ್ಡ್ ಸದಸ್ಯರು. ಪದವು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.