ADVERTISEMENT

ಹನುಮ ಭಕ್ತಿಯ ಪ್ರತಿರೂಪ: ಪಲಿಮಾರು ಶ್ರೀ

ಶ್ರೀಕೃಷ್ಣ ಮಠದಲ್ಲಿ ಹನುಮ ಜಯಂತಿ ಸಂಭ್ರಮ; ಬೃಹತ್ ಅನ್ನದ ಪಲ್ಲಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 14:28 IST
Last Updated 19 ಏಪ್ರಿಲ್ 2019, 14:28 IST
ಹನುಮ ಜಯಂತಿ ಅಂಗವಾಗಿ  ಸಾರ್ವಜನಿಕ ಅನ್ನಸಂತರ್ಪಣೆಗೆ ಸಿದ್ಧಪಡಿಸಲಾಗಿದ್ದ ಬೃಹತ್ ಅನ್ನದ ಪಲ್ಲಕ್ಕೆ ಪರ್ಯಾಯ ವಿದ್ಯಾಧೀಶ ತೀರ್ಥರು ಪೂಜೆ ಸಲ್ಲಿಸಿದರು.
ಹನುಮ ಜಯಂತಿ ಅಂಗವಾಗಿ  ಸಾರ್ವಜನಿಕ ಅನ್ನಸಂತರ್ಪಣೆಗೆ ಸಿದ್ಧಪಡಿಸಲಾಗಿದ್ದ ಬೃಹತ್ ಅನ್ನದ ಪಲ್ಲಕ್ಕೆ ಪರ್ಯಾಯ ವಿದ್ಯಾಧೀಶ ತೀರ್ಥರು ಪೂಜೆ ಸಲ್ಲಿಸಿದರು.   

ಉಡುಪಿ: ‘ಉಸಿರಾಟಕ್ಕೆ ಮುಖ್ಯ ಪ್ರಾಣವಾಯು. ದೇವನಾದ ಹನುಮ ಭಕ್ತಿಯ ಪ್ರತಿರೂಪವಿದ್ದಂತೆ. ಕರ್ತವ್ಯದ ಸಾಕಾರ ಮೂರ್ತಿಯಂತೆ’ ಎಂದು ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಹೇಳಿದರು.

ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶುಕ್ರವಾರ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ಹನುಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹನುಮ ದೇವರು ನಮ್ಮ ಜತೆಗೆ ಇರುವಷ್ಟು ದಿನ ಬದುಕು ಶಾಶ್ವತವಾಗಿರುತ್ತದೆ. ಹನುಮ ಜಯಂತಿಯನ್ನು ಎಲ್ಲರೂ ಒಟ್ಟಾಗಿ ಆಚರಿಸೋಣ. ಈ ಪರ್ವಕಾಲ ಲೋಕಕ್ಕೆ ಒಳಿತಾಗಲಿ’ ಎಂದು ಹಾರೈಸಿದರು.

ADVERTISEMENT

ಸಾರ್ವಜನಿಕ ಅನ್ನಸಂತರ್ಪಣೆಗೆ ಸಿದ್ಧಪಡಿಸಲಾಗಿದ್ದ ಬೃಹತ್ ಅನ್ನದ ಪಲ್ಲಕ್ಕೆ ಪರ್ಯಾಯ ವಿದ್ಯಾಧೀಶ ತೀರ್ಥರು ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ರಾಜಾಂಗಣದಲ್ಲಿ ಭಜನಾ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿದರು.

ಬೆಳಿಗ್ಗೆ ಶ್ರೀಕೃಷ್ಣಮಠದಲ್ಲಿ ವಾಯುಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾಮಂತ್ರ ಹೋಮ, ಮಹಾಮಂತ್ರ ಹೋಮ, ಕಷ್ಣನಿಗೆ ವಜ್ರ ಕವಚ, ಹೂವಿನ ಸೇವೆ ಜರಗಿತು.

ಮಧ್ವಮಂಟಪದಲ್ಲಿ ಮಂಟಪದಲ್ಲಿ ವಿವಿಧ ತಂಡಗಳಿಂದ ಭಜನೆ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಬಳಗದಿಂದ ಭಕ್ತಿಗಾನ ಸುಧೆ, ರಾಜಾಂಗಣದಲ್ಲಿ ಪಡುಬಿದ್ರಿ ಚಂದ್ರಕಾಂತ ಬಳಗದದಿಂದ ಸುಗಮ ಸಂಗೀತ, ಪುತ್ತಿಗೆ ಚಂದ್ರಶೇಖರ್ ಅವರ ಸ್ಯಾಕ್ಸೋಫೋಣ್‌ ವಾದನ ನಡೆಯಿತು. ಬಳಿಕ ಆಕರ್ಷಕ ಸುಡುಮದ್ದು ಪ್ರದರ್ಶನ, ಬ್ರಹ್ಮರಥ, ಸ್ವರ್ಣರಥ, ನವರತ್ನರಥ ಸೇವೆ ಜರಗಿತು.

ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಜಿತೇಶ್ ಕಿದಿಯೂರು, ಪರ್ಯಾಯ ಮಠದ ಪಿಆರ್‌ಒ ಶ್ರೀಶ ಕಡೆಕಾರ್, ಯುವರಾಜ್ ಮಸ್ಕತ್, ಮಧುಸೂದನ ಪೂಜಾರಿ, ಮಾಧವ ಸುವರ್ಣ, ಈಶ್ವರ್ ಚಿಟ್ಪಾಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.