ADVERTISEMENT

ಮನೆಮನೆಯಲ್ಲೂ ಧ್ವಜ ಹಾರಿಸಿ: ತಹಶೀಲ್ಧಾರ್‌ ಪುರಂದರ್‌

ಹೆಬ್ರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ -‘ಅಮೃತ ನಡಿಗೆ’ ಜಾಥಾ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 3:07 IST
Last Updated 14 ಆಗಸ್ಟ್ 2022, 3:07 IST
ಹೆಬ್ರಿಯ ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ನಡೆದ ಅಮೃತ ನಡಿಗೆ ಕಾಲ್ನಡಿಗೆ ಜಾಥವು ಲಯನ್ಸ್‌ ವೃತ್ತದ ಬಳಿ ಸಂಪನ್ನಗೊಂಡಿತು.
ಹೆಬ್ರಿಯ ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ನಡೆದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ನಡೆದ ಅಮೃತ ನಡಿಗೆ ಕಾಲ್ನಡಿಗೆ ಜಾಥವು ಲಯನ್ಸ್‌ ವೃತ್ತದ ಬಳಿ ಸಂಪನ್ನಗೊಂಡಿತು.   

ಹೆಬ್ರಿ: ಹೆಬ್ರಿಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ನಡೆದ ಅಮೃತ ನಡಿಗೆ ಕಾಲ್ನಡಿಗೆ ಜಾಥಾದ ಸಂಭ್ರಮಕ್ಕೆ ಸ್ಥಳೀಯರು ಸಾಕ್ಷಿಯಾದರು.

ಹೆಬ್ರಿ ತಾಲ್ಲೂಕು ಕಚೇರಿ, ಚಾರ ಗ್ರಾಮ ಪಂಚಾಯಿತಿ, ಅಮೃತಭಾರತಿ ವಿದ್ಯಾಲಯ ಮತ್ತು ಬಂಟರ ಸಂಘದಿಂದ ಹೆಬ್ರಿಯ ನಾಲ್ಕು ಮುಖ್ಯರಸ್ತೆಯಿಂದ ಏಕಕಾಲದಲ್ಲಿ ಆರಂಭಗೊಂಡ ಆಕರ್ಷಕ ಕಾಲ್ನಡಿಗೆ ಜಾಥವು ಪೇಟೆಯ ಲಯನ್ಸ್‌ವೃತ್ತದಲ್ಲಿ ಸಮಾಪನಗೊಂಡಿತು.

ಈ ವೇಳೆ ಮಾತನಾಡಿದ ತಹಶೀಲ್ಧಾರ್‌ ಪುರಂದರ್‌ ‘ಅಮೃತ ಮಹೋತ್ಸವ ಬಳಿಕ ಎಲ್ಲರ ಮನೆಮನವೂ ಬೆಳಗಲಿ. ಎಲ್ಲರೂ ಮನೆಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿ, ತಾಲ್ಲೂಕು ಆಡಳಿತದ ವತಿಯಿಂದ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಮಾದರಿಯಾಗಿ ಯಶಸ್ವಿಗೊಳಿಸಿ’ ಎಂದು ಮನವಿ ಮಾಡಿದರು.

ADVERTISEMENT

ಚಾರ ಜವಾಹರ ನವೋದಯ ವಿದ್ಯಾಲಯ, ಹೆಬ್ರಿ ಎಸ್‌ಆರ್‌ ಸಮೂಹ ಶಿಕ್ಷಣ ಸಂಸ್ಥೆ, ಅಮೃತ ಭಾರತಿ ಪದವಿ ಪೂರ್ವ ಕಾಲೇಜು, ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 800ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಹೆಬ್ರಿ ನಕ್ಸಲ್‌ ನಿಗ್ರಹ ಪಡೆಯ ಅಧಿಕಾರಿಗಳು ಮತ್ತು ಪೊಲೀಸರ ತಂಡ ಬಿಳಿವಸ್ತ್ರದಲ್ಲಿ ಸಾಗಿ ಬಂದು ಜಾಥಕ್ಕೆ ವಿಶೇಷ ಮೆರುಗು ನೀಡಿದರು.

ಹೆಬ್ರಿ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಸದಸ್ಯರು ಅಮೃತ ನಡಿಗೆಗೆ ಸಾಥ್‌ ನೀಡಿದರು. ಭಾರತ ಮಾತೆಯ ವೇಷಧಾರಿ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.

ಅಮೃತ ನಡಿಗೆ ಸಮಿತಿಯ ಅಧ್ಯಕ್ಷ ಟಿ.ಜಿ.ಆಚಾರ್ಯ, ಸಂಚಾಲಕರಾದ ದಿನಕರ ಪ್ರಭು, ಪ್ರಕಾಶ ಶೆಟ್ಟಿ ಹೆಬ್ರಿ, ಎಸ್‌ಆರ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಡಾ.ಭಾರ್ಗವಿ ಆರ್‌. ಐತಾಳ್‌, ಶಂಕರ ಶೇರಿಗಾರ್‌, ಹರೀಶ ಪೂಜಾರಿ, ನಾಗರಾಜ ಶೆಟ್ಟಿ ಜಾಥಾದ ಯಶಸ್ಸಿಗೆ ಸಹಕರಿಸಿದರು.

ಹೆಬ್ರಿ ತಹಶೀಲ್ದಾರ್‌ ಪುರಂದರ್‌ ಕೆ., ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್‌ ಕೆ.ಜಿ., ನಕ್ಸಲ್‌ ನಿಗ್ರಹ ಪಡೆಯ ಇನ್‌ಸ್ಪೆಕ್ಟರ್‌ ಸತೀಶ್‌‌ ಬಿ.ಎಸ್., ಹೆಬ್ರಿ ಸಬ್‌ ಇನ್‌ಸ್ಪೆಕ್ಟರ್‌ ಸುದರ್ಶನ್‌ ದೊಡ್ಡಮನಿ, ಅರಣ್ಯಾಧಿಕಾರಿ ಅನಿಲ್‌ ಕುಮಾರ್‌, ಉಪ ತಹಶೀಲ್ದಾರ್‌ ಲಾಯನ್ಸ್‌ ಸುಜ್ಯೋತಿ, ಕಂದಾಯ ನಿರೀಕ್ಷಕ ಹಿತೇಶ್‌ ಯುಬಿ, ಪ್ರಾಂಶುಪಾಲರಾದ ಡಾ.ಪ್ರಸಾದ್‌ ರಾವ್‌, ಉಮೇಶ್‌, ವಿವಿಧ ಇಲಾಖೆಯ ಅಧಿಕಾರಿಗಳು, ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಪಿಡಿಒ ಸದಾಶಿವ ಸೇರ್ವೆಗಾರ್‌, ಹೆಬ್ರಿಯ ಪ್ರಮುಖರಾದ ಗುರುದಾಸ ಶೆಣೈ, ಭಾಸ್ಕರ ಜೋಯಿಸ್‌, ಹರ್ಷ ಶೆಟ್ಟಿ, ಸುರೇಶ ಶೆಟ್ಟಿ ಶಿವಪುರ, ರಮೇಶ್‌ ಕುಮಾರ್‌ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಸೀತಾನದಿ ವಿಠ್ಠಲ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.