ADVERTISEMENT

ಗಾಂಧೀಜಿ ಅಂಬೇಡ್ಕರ್ ವಿರುದ್ಧ ದ್ವೇಷ: ಚಿಂತಕ ಕೆ.ಫಣಿರಾಜ್

ಸಹಬಾಳ್ವೆ ಸಂಘಟನೆಯಿಂದ ಸದ್ಭಾವನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 15:46 IST
Last Updated 2 ಅಕ್ಟೋಬರ್ 2022, 15:46 IST
ಸಹಬಾಳ್ವೆ ಉಡುಪಿ ಸಂಘಟನೆಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸದ್ಭಾವನಾ ಮೆರವಣಿಗೆಯಲ್ಲಿ ರಾಷ್ಟ್ರಧ್ವಜ ಹಿಡಿದು ಸಾಗಿದ ಕಾರ್ಯಕರ್ತರು.
ಸಹಬಾಳ್ವೆ ಉಡುಪಿ ಸಂಘಟನೆಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸದ್ಭಾವನಾ ಮೆರವಣಿಗೆಯಲ್ಲಿ ರಾಷ್ಟ್ರಧ್ವಜ ಹಿಡಿದು ಸಾಗಿದ ಕಾರ್ಯಕರ್ತರು.   

ಉಡುಪಿ: ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್, ದಲಿತರು ಹಾಗೂ ಮುಸ್ಲಿಮರ ವಿರುದ್ಧ ದ್ವೇಷ ಹರಡಲಾಗುತ್ತಿದೆ ಎಂದು ಚಿಂತಕ ಕೆ.ಫಣಿರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಸಹಬಾಳ್ವೆ ಉಡುಪಿ ಸಂಘಟನೆಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸದ್ಭಾವನಾ ಮೆರವಣಿಗೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಗಾಂಧೀಜಿ ಬಗ್ಗೆ ನಡೆಯುತ್ತಿರುವ ಅಪಪ್ರಚಾರಗಳಿಗೆ ಸಮರ್ಥವಾಗಿ ಉತ್ತರ ಕೊಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಯಾರೂ ಪ್ರಶ್ನಾತೀತರಲ್ಲ, ಗಾಂಧೀಜಿಯವರೂ ಹೊರತಲ್ಲ ಎಂದರು.

ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಕುರಿತು ಸಂವಾದವನ್ನು ಸಮಾಜದಲ್ಲಿ ಮುಂದವರಿಸಬೇಕಾದ ಹೊಣೆಗಾರಿಕೆ ಇದೆ. ಪ್ರೀತಿ ಹಾಗೂ ಶಾಂತಿಯಿಂದ ಮಾತ್ರ ಹಿಂಸೆಯನ್ನು ದೂರ ಮಾಡಬಹುದು ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.

ADVERTISEMENT

ಬನ್ನಂಜೆಯ ನಾರಾಯಣ ಗುರು ಮಂದಿರದಲ್ಲಿ ಪೂಜೆ ಸಲ್ಲಿಸಿ ಸಭಾಭವನದ ಆವರಣದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಆನಂದ ಪೂಜಾರಿ ಅವರು ಸಹಬಾಳ್ವೆ ಸಂಘಟನೆಯ ಅಧ್ಯಕ್ಷ ಅಮೃತ್ ಶೆಣೈ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು.

ಬನ್ನಂಜೆಯಿಂದ ಆರಂಭವಾದ ಮೆರವಣಿಗೆ ಜಾಮಿಯಾ ಮಸೀದಿಗೆ ತೆರಳಿ ನಂತರ ಕೆ.ಎಂ ಮಾರ್ಗದಲ್ಲಿರುವ ಶೋಕಮಾತಾ ಚರ್ಚ್‌ ಮೂಲಕ ಸಾಗಿ ಅಜ್ಜರಕಾಡಿನ ಗಾಂಧಿ ಉದ್ಯಾನದಲ್ಲಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಕೈನಲ್ಲಿ ರಾಷ್ಟ್ರಧ್ವಜ ಹಿಡಿದು ಸಾಗುತ್ತಾ ದೇಶದ ಪರವಾಗಿ ಘೋಷಣೆ ಮೊಳಗಿಸಿದರು.

ಕಾರ್ಯಕ್ರಮದಲ್ಲಿ ಸಹಬಾಳ್ವೆ ಸಂಚಾಲಕ ಯಾಸಿನ್ ಮಲ್ಪೆ, ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಫಾದರ್ ವಿಲಿಯಂ ಮಾರ್ಟಿಸ್, ಕೆಥೊಲಿಕ್ ಸಭಾ ಅಧ್ಯಕ್ಷೆ ಮೇರಿ ಡಿಸೋಜ, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ನಗರಸಭೆ ಸದಸ್ಯ ರಮೇಶ್ ಕಾಂಚನ್, ಬನ್ನಂಜೆ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಮಾಧವ ಬನ್ನಂಜೆ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.