ಉಡುಪಿ: ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡ ಪರಿಣಾಮವಾಗಿ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ಸೃಷ್ಟಿಯಾಗಿದೆ.
ಬೈಂದೂರು, ಕುಂದಾಪುರ ವ್ಯಾಪ್ತಿಯಲ್ಲಿ ಗುರುವಾರ ಹಲವೆಡೆ ಮನೆ, ಕೃಷಿ ಪ್ರದೇಶಗಳಿಗೆ ನೆರೆನೀರು ನುಗ್ಗಿತ್ತು. ಶುಕ್ರವಾರವೂ ಮಳೆ ಕಡಿಮೆಯಾಗದ ಕಾರಣ ಪ್ರವಾಹದ ನೀರು ಇಳಿಕೆಯಾಗಿಲ್ಲ.
ಶಾಸಕರ ಭೇಟಿ (ಬೈಂದೂರು ವರದಿ): ಬೈಂದೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದ ಪರಿಣಾಮವಾಗಿ ಕೆಲವೆಡೆ ಅಪಾರ ಹಾನಿ ಸಂಭವಿಸಿದೆ. ಬೈಂದೂರಿನ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿಗೂ ಹಾನಿ ಸಂಭವಿಸಿದೆ. ಶಾಸಕ ಗುರುರಾಜ್ ಗಂಟಿಹೊಳೆ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಬೈಂದೂರು ತಾಲೂಕಿನಲ್ಲಿ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಸೌಪರ್ಣಿಕಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯ ಅಕ್ಕ ಪಕ್ಕ ಪ್ರದೇಶಗಳಾದ ನಾವುಂದ, ಸಾಲ್ಬುಡ, ಬಡಾಕೆರೆ, ನಾಡ, ಕಡ್ಕೆ, ಮರವಂತೆ, ಪಡುಕೋಣೆ, ಚಿಕ್ಕಳ್ಳಿ, ಸಂಸಾಡಿ, ಹೆಮ್ಮುಂಜಿ, ಕೋಣ್ಕಿ ಪ್ರದೇಶಗಳಿಗೆ ಭೇಟಿ ನೀಡಿ ನೆರೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಶಾಸಕರು ಸ್ಥಳೀಯರು ಹಾಗೂ ಪಂಚಾಯಿತಿ ಪ್ರತಿನಿಧಿಯೊಂದಿಗೆ ಚರ್ಚಿಸಿದರು.
ಜನರ ಸ್ಥಳಾಂತರ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಕ್ಕೆ ಅಗತ್ಯ ಸೂಚನೆ ನೀಡಿದರು.
ಎಡೆಬಿಡದೆ ಸುರಿಯುತ್ತಿರುವ ಮಳೆಯು ಇನ್ನಷ್ಟು ಅಪಾಯ ತಂದೊಡ್ಡುವ ಭೀತಿ ಇದ್ದು, ಕ್ಷೇತ್ರದ ಜನರು ಸಂಭಾವ್ಯ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಜನರಲ್ಲಿ ಅವರು ಮನವಿ ಮಾಡಿದ್ದಾರೆ.
ಸ್ವಯಂಸೇವಕರಿಗೆ ಊಟದ ವ್ಯವಸ್ಥೆ: ನಿರಂತರ ಮಳೆಯಿಂದಾಗಿ ನಾವುಂದ ಬಡಕೇರಿಯ ಸಾಲುಬುಡ ಸಂಪೂರ್ಣ ಜಲಾವೃತಗೊಂಡಿದ್ದು, ಸುಮಾರು 80 ಮನೆಗಳ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಸ್ವಯಂ ಸೇವಕರು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು 50ಕ್ಕೂ ಅಧಿಕ ಸ್ವಯಂಸೇವಕರು ನಿರಂತರ ಸೇವಾ ಪರಿಹಾರ ಕಾರ್ಯದಲ್ಲಿ ತೊಡಗಿದ್ದು ಅವರಿಗೆ ಬೈಂದೂರಿನ ಸಮೃದ್ಧ ಜನಸೇವಾ ಟ್ರಸ್ಟ್ ವತಿಂದ 80ಕ್ಕೂ ಹೆಚ್ಚು ಊಟದ ಪ್ಯಾಕೇಟ್ ಗಳನ್ನು ವಿರಿಸಲಾಯಿತು.
ನೆರೆ ಪೀಡಿತ ಪ್ರದೇಶಕ್ಕೆ ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಉದ್ಯಮಿ ಸುರೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಖಜಾಂಚಿ ಶ್ರೀಗಣೇಶ್ ಗಾಣಿಗ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೋಮಯ್ಯ, ಮಂಡಲ ಕಾರ್ಯದರ್ಶಿ ಪ್ರಸಾದ್ ಪಿ. ಬೈಂದೂರು ಸೇಹಿತ ಅನೇಕರು ಭೇಟಿ ನೀಡಿ, ಪರಿಹಾರ ಕಾರ್ಯಕ್ಕೆ ಸಹಕರಿಸಿದರು.
ಜಲಾವೃತಗೊಳ್ಳುವ ಪ್ರದೇಶಗಳ ಜನರಿಗೆ ಮುನ್ಸೂಚನೆ ನೀಡಲಾಗಿದೆ. ರಕ್ಷಣಾ ತಂಡಗಳನ್ನು ಜಾಗೃತ ಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದ್ದು ಅಗತ್ಯಬಿದ್ದಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗುವುದುರಶ್ಮಿ ಎಸ್.ಆರ್ ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.