ADVERTISEMENT

ಹೆಬ್ರಿ | ಬಗರ್‌ ಹುಕುಂ: ರೋವರ್‌ನಲ್ಲಿ ಸರ್ವೆ

ಸರ್ಕಾರದಿಂದ ಮಹತ್ವದ ಕಾರ್ಯ, ವರಂಗದಲ್ಲಿ ರೋವರ್‌ ಸರ್ವೆ ಕಾರ್ಯ ಆರಂಭ

ಸುಕುಮಾರ್ ಮುನಿಯಾಲ್
Published 24 ಮೇ 2025, 7:30 IST
Last Updated 24 ಮೇ 2025, 7:30 IST
ಭೂಮಾಪನ ಇಲಾಖೆಯ ಅಧಿಕಾರಿಗಳು ವರಂಗ ಗ್ರಾಮದ ಕೃಷಿ ಕ್ಷೇತ್ರವೊಂದರಲ್ಲಿ ಬಗರ್‌ ಹುಕುಂ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಗಾಗಿ ಆಧುನಿಕ ತಂತ್ರಜ್ಞಾನದ ರೋವರ್‌ ಸರ್ವೆ ಕಾರ್ಯ ನಡೆಸಿದರು
ಭೂಮಾಪನ ಇಲಾಖೆಯ ಅಧಿಕಾರಿಗಳು ವರಂಗ ಗ್ರಾಮದ ಕೃಷಿ ಕ್ಷೇತ್ರವೊಂದರಲ್ಲಿ ಬಗರ್‌ ಹುಕುಂ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಗಾಗಿ ಆಧುನಿಕ ತಂತ್ರಜ್ಞಾನದ ರೋವರ್‌ ಸರ್ವೆ ಕಾರ್ಯ ನಡೆಸಿದರು   

ಹೆಬ್ರಿ: ರಾಜ್ಯದ ಬುಡಕಟ್ಟು, ಭೂರಹಿತ ಮತ್ತು ಅರಣ್ಯದಲ್ಲಿ ವಾಸಿಸುವ ಸಮುದಾಯಗಳು ಕೃಷಿ ಸಾಗುವಾಳಿ ಮಾಡಿಕೊಂಡು ಬರುತ್ತಿದ್ದ ಭೂಮಿಗೆ ದಶಕಗಳಿಂದ ಹಕ್ಕುಪತ್ರ ಇಲ್ಲದೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಂದ ವಂಚಿತರಾಗಿದ್ದ ಜನರಿಗೆ ಸರ್ಕಾರ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ.

ಅದರಂತೆ ಬಗರ್‌ ಹುಕುಂ, ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಗಾಗಿ ಭೂದಾಖಲೆ, ಭೂಮಾಪನ ಇಲಾಖೆಯಿಂದ ಆಧುನಿಕ ತಂತ್ರಜ್ಞಾನದ ರೋವರ್‌ ಸರ್ವೆ ಕಾರ್ಯ ಮಾಡಿಸಿ ಶೀಘ್ರ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಮುಂದಾಗಿದೆ.

ಇದರ ಭಾಗವಾಗಿ ತಾಲ್ಲೂಕಿನ ವರಂಗ ಗ್ರಾಮದ ಕೃಷಿ ಕ್ಷೇತ್ರದಲ್ಲಿ ಬಗರ್‌ ಹುಕುಂ ಅರ್ಜಿಗಳ ವಿಲೇವಾರಿಗಾಗಿ ಆಧುನಿಕ ತಂತ್ರಜ್ಞಾನದ ರೋವರ್‌ ಸರ್ವೆ ಕಾರ್ಯ ಭೂಮಾಪನ ಇಲಾಖೆ ಅಧಿಕಾರಿಗಳಿಂದ ಶುಕ್ರವಾರ ಆರಂಭಗೊಂಡಿದೆ. ಪ್ರತಿ ತಾಲ್ಲೂಕಿನಲ್ಲಿಯೂ ಸಾವಿರಾರು ಅರ್ಜಿಗಳು ಬಾಕಿಯಿದ್ದು, ಜಿಲ್ಲೆಯ ಸಾವಿರಾರು ಮಂದಿ ಹಕ್ಕುಪತ್ರಕ್ಕಾಗಿ ಎದುರು ನೋಡುತ್ತಿದ್ದಾರೆ.

ADVERTISEMENT

ಕಂದಾಯ ಸಚಿವರು ಮುಂದಿನ 6 ತಿಂಗಳಿನ ಒಳಗಾಗಿ ಬಹುತೇಕ ಬಾಕಿಯಿರುವ ಬಗರ್‌ ಹುಕುಂ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ ಮಾಡಿ ಭೂಮಿಯ ವಾರೀಸುದಾರರಿಗೆ ಶಾಶ್ವತ ಹಕ್ಕುಪತ್ರ ನೀಡಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ಬಿರುಸುಗೊಂಡಿದೆ. ಮಳೆಯ ನಡುವೆಯೂ ತಾಲ್ಲೂಕಿನಲ್ಲಿ ರೋವರ್‌ ಸರ್ವೆ ಕಾರ್ಯ ಬಿರುಸುಗೊಂಡಿದೆ. ಭೂಮಾಪನ ಇಲಾಖೆಯ ಪರ್ಯಾವೇಕ್ಷಕ ಉದಯ ಕುಮಾರ್‌ ಎಂ, ತಾಲ್ಲೂಕು ಸರ್ವೆಯರ್‌ ರವಿರಾಜ್, ಸಹಾಯಕ ಶಂಕರ್‌ ಶಿವಪುರ ಕಾರ್ಯದಲ್ಲಿ ತೊಡಗಿದ್ದಾರೆ. 

- ಪಾಪಣ್ಣ ನಾಯ್ಕ್‌ ಮುನಿಯಾಲು.

ಮನೆಗೆ ಬಂದು ಸರ್ವೆ: ಸಂತಸ ನಾವು ಕೃಷಿ ಮಾಡಿಕೊಂಡು ಹಲವು ವರ್ಷಗಳಿಂದ ಜೀವನ ನಡೆಸುತ್ತಿದ್ದೇವೆ. ಅರ್ಜಿ ಕೊಟ್ಟು ಹಲವಾರು ವರ್ಷಗಳೇ ಕಳೆದಿವೆ. ಈಗ ಸರ್ಕಾರದ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ನಮ್ಮ ಜಾಗದ ಸರ್ವೆ ಕಾರ್ಯ ನಡೆಸಿ ಕಡತ ತಯಾರಿಸಿ ಮುಂದೆ ಹಕ್ಕುಪತ್ರಕ್ಕಾಗಿ ಮಂಡಿಸುತ್ತಿರುವುದು ಮಹತ್ವದ ಕಾರ್ಯ. ನಮಗೆ ಅತ್ಯಂತ ಖುಷಿಯಾಗಿದೆ. ಇದರಿಂದ ಮಾಹಿತಿಯ ಅರಿವಿಲ್ಲದ ಹಕ್ಕುಪತ್ರ ಪಡೆಯದ ಸಾವಿರಾರು ಮಂದಿಗೆ ವರದಾನವಾಗಲಿದೆ ಎಂದು ಅರ್ಜಿದಾರ ಪಾಪಣ್ಣ ನಾಯ್ಕ್‌ ಮುನಿಯಾಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.