
ಹೆಬ್ರಿ: ಮುದ್ರಾಡಿ ಗ್ರಾಮದ ಬಲ್ಲಾಡಿಯ ಶ್ರೀ ಅಬ್ಬಗ ದಾರಗ ಅರ್ಧನಾರೀಶ್ವರ ದೇವಸ್ಥಾನ ಹಾಗೂ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನ ಜೀರ್ಣದ್ಧಾರ ಸಮಿತಿ ಅಧ್ಯಕ್ಷ ದಿವಾಕರ ಎನ್ ಶೆಟ್ಟಿ, ಜೀರ್ಣೋದ್ಧಾರಕ್ಕೆ ನೀಲನಕ್ಷೆ ರಚಿಸಿದ್ದು ಅಂದಾಜು ₹ 4.75 ಕೋಟಿ ವೆಚ್ಚ ತಗಲಬಹುದು ಎಂದರು.
ಸಮಿತಿಯ ಉಪಾಧ್ಯಕ್ಷ ಉದಯ ಹೆಗ್ಡೆ ಕೊಳಂಬೆ ಮಾತನಾಡಿ ಬೆಂಗಳೂರಿನಲ್ಲಿ ನೆಲೆಸಿರುವ ಊರಿನ ಜನರ ಸಂಪರ್ಕ ಮಾಡಿ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ ಸಂಗ್ರಹ ಮಾಡಲಾಗುವುದು ಎಂದರು. ಪೇಟೆಗಳಲ್ಲಿ ಫ್ಲೆಕ್ಸ್ ಅಳವಡಿಸಬೇಕು ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶುಭಧರ ಶೆಟ್ಟಿ ಹೇಳಿದರು.
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗುರು ಪ್ರಸಾದ್ ಕೊಳಂಬೆ, ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಸದಸ್ಯರಾದ ಗಣಪತಿ ಮುದ್ರಾಡಿ, ಸನತ್ ಕುಮಾರ್ ಹಾಜರಿದ್ದರು. ಶ್ರೀಧರ್ ಹೆಬ್ಬಾರ್ ಕಾಪೋಳಿ ಸ್ವಾಗತಿಸಿದರು. ಗರಡಿ ಅರ್ಚಕ ಸಂತೋಷ್ ಆರ್. ಪೂಜಾರಿ ವಂದಿಸಿದರು.