ADVERTISEMENT

ಹೆಬ್ರಿ | ತೆಂಗಿಗೆ ಕೆಂಚಳಿಲು ಲಗ್ಗೆ: ಫಸಲು ನಾಶ

ಬೆಳೆಗಳಿಗೆ ಕಾಡು ಪ್ರಾಣಿಗಳ ದಾಳಿಯಿಂದ ಕಂಗೆಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 5:06 IST
Last Updated 22 ಅಕ್ಟೋಬರ್ 2025, 5:06 IST
ಕೆಂಚಳಿಲು ತಿಂದು ಹಾಕಿದ ಸಿಯಾಳ.
ಕೆಂಚಳಿಲು ತಿಂದು ಹಾಕಿದ ಸಿಯಾಳ.   

ಹೆಬ್ರಿ: ಕೃಷಿಕರಿಗೆ ಕಾಡುಕೋಣ, ಹಂದಿ, ಜಿಂಕೆ, ಮಂಗಗಳು, ನವಿಲು ಸಹಿತ ಪಕ್ಷಿಗಳ ಕಾಟ ಒಂದೆಡೆಯಾದರೆ ಇದೀಗ ಕಾಡಿನಲ್ಲಿರುವ ಕೆಂಚಳಿಲು ಕಾಟ ಕೊಡುತ್ತಿದೆ.

ಹಂದಿ ಗದ್ದೆಗಿಳಿದು ಭತ್ತದ ಫಸಲು ನಾಶ ಪಡಿಸುತ್ತಿದೆ. ಗದ್ದೆಯನ್ನು ಹಾಳು ಮಾಡುತ್ತದೆ. ನವಿಲು, ಮಂಗಗಳು ಕೂಡ ಭತ್ತದ ಫಸಲನ್ನು ಹಾಳು ಮಾಡುತ್ತಿದೆ. ತರಕಾರಿ ಸಹಿತ ಇನ್ನಿತರ ಬೆಳೆಯನ್ನು ನವಿಲುಗಳು ಹಿಂಡುಹಿಂಡಾಗಿ ಲಗ್ಗೆಯಿಟ್ಟು ತಿನ್ನುತ್ತಿವೆ.

ತರಕಾರಿ ಗಿಡಗಳನ್ನು ಮೊಳಕೆಯಲ್ಲೇ ನವಿಲುಗಳು ತಿನ್ನುತ್ತಿವೆ. ತರಕಾರಿಯನ್ನು ಬೆಳಸಲು ಕಷ್ಟವಾಗುತ್ತಿದೆ. ಇತ್ತೀಚೆಗೆ ನವಿಲುಗಳ ಕಾಟ ಭಾರೀ ಹೆಚ್ಚಾಗಿದ್ದು, ನಾವು ತರಕಾರಿ ಬೆಳೆಯುವುದನ್ನೇ ಬಿಟ್ಟಿದ್ದೇವೆ ಎಂದು ಕೃಷಿಕ ಆನಂದ ಆಚಾರ್‌ ಕಡ್ತಲ ಹೇಳುತ್ತಾರೆ.

ADVERTISEMENT

ಇನ್ನು ಮಂಗಗಳು ತರಕಾರಿ, ಭತ್ತದ ಫಸಲು, ಬಾಳೆ, ಸಿಯಾಳ, ಹಣ್ಣುಹಂಪಲು ಎಲ್ಲವನ್ನೂ ತಿನ್ನುತ್ತವೆ. ಕಷ್ಟದಲ್ಲಿ ಕೃಷಿ ಮಾಡಿ ಫಸಲು ಬರುವಾಗ ಕಾಡುಪ್ರಾಣಿ ಪಕ್ಷಿಗಳಿಂದ ಕೃಷಿಕರ ಪಾಲಿಗೆ ಯಾವುದೂ ಕೈಗೆ ಸಿಗುತ್ತಿಲ್ಲ. ಕಾಡುಪ್ರಾಣಿ ಪಕ್ಷಿಗಳ ಕಾಟದಿಂದ ಕೃಷಿಕರು ರೋಸಿ ಹೋಗಿದ್ದಾರೆ.

ಈ ಸಲ ಭಾರಿ ಮಳೆಯಿಂದಾಗಿ ಅಡಿಕೆಯು ಕೊಳೆರೋಗದಿಂದ ಉದುರುತ್ತಿದೆ. ಅಡಿಕೆ ಬೆಳೆಗಾರರಿಗೆ ಈ ಸಲ ಅಡಿಕೆ ಬೆಳೆಯಲ್ಲಿ ಅಪಾರ ನಷ್ಟವಾಗಿದೆ. ರೈತರು ತೀವ್ರವಾದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ತೆಂಗಿನ ಮರದಿಂದ ಸಿಯಾಳವನ್ನು ಪಡೆಯೋಣವೆಂದರೆ ಮಂಗಗಳು ಹಿಂಡುಹಿಂಡಾಗಿ ಬಂದು ತಿನ್ನುತ್ತಿವೆ.  ಈ ಕಡೆ ಅಪರೂಪವಾಗಿದ್ದ ಕೆಂಚಳಿಲು ಈಗ ತೆಂಗಿನ ಮರಗಳಿಗೆ ದಾಂಗುಡಿಯಿಡುತ್ತಿವೆ.

ಯಾವುದೇ ಸದ್ದಿಲ್ಲದೆ ತೆಂಗಿನ ಮರಕ್ಕೆ ಬರುವ ಕೆಂಚಳಿಲು ಒಮ್ಮೆ ಬಂದರೆ ನಾಲ್ಕೈದು ಸಿಯಾಳವನ್ನು ತಿಂದು ಮುಗಿಸುತ್ತೆ. ಮಂಗಗಳು ತೆಂಗಿನ ಮರಕ್ಕೆ ಬಂದರೆ ಸ್ವಲ್ಪ ಪ್ರಮಾಣದ ಸದ್ದು ಆಗಿ ತಿಳಿಯುತ್ತದೆ. ಗೊತ್ತಾಗಿ ಓಡಿಸಲು ಸಾಧ್ಯವಾಗುತ್ತದೆ. ಆದರೆ ಕೆಂಚಳಿಲು ಬರುವುದು ತಿಳಿಯುವುದೇ ಇಲ್ಲ ಎನ್ನುತ್ತಾರೆ ರೈತರು.

ಕೆಂಚಳಿಲು ದಾಳಿ ತೆಂಗು ಬೆಳೆಗಾರರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಕೆಂಚಳಿಲು ಲಗ್ಗೆಯಿಂದ ಪಾರಾಗುವುದು ಹೇಗೆ ಎಂದು ತಿಳಿಯುತ್ತಿಲ್ಲ ಎಂದು ಕೃಷಿಕರಾದ ಶಿವಣ್ಣ ಶೆಟ್ಟಿ ಹೇಳುತ್ತಾರೆ.

ಮರಕ್ಕೆ ಬಂದು ಸಿಯಾಳ ತಿನ್ನಲು ಕುಳಿತರೆ ಓಡಿಸಲು ಕೂಡ ಸಾಧ್ಯವಾಗುತ್ತಿಲ್ಲ. ಹೊಟ್ಟೆ ತುಂಬಾ ಸಿಯಾಳವನ್ನು ತಿಂದೇ ಕೆಂಚಳಿಲು ಮರಗಳಿಂದ ಹೋಗುತ್ತವೆ. ಕೆಂಚಳಿಲು ತೆಂಗಿನ ಮರಕ್ಕೆ ಲಗ್ಗೆಯಿಡುವುದರಿಂದ ತೆಂಗು ಬೆಳೆಗಾರರಿಗೆ ಅಪಾರ ನಷ್ಟವಾಗುತ್ತಿದೆ. ರೈತರಿಗೆ ಎಲ್ಲಾ ರೀತಿಯಲ್ಲೂ ನಿರಂತರವಾಗಿ ಹೇಳತೀರದ ಸಂಕಷ್ಟವೇ ಎದುರಾಗುತ್ತಿದೆ ಎಂದೂ ತಿಳಿಸಿದರು.

ಕೆಂಚಳಿಲು ತಿಂದು ಹಾಕಿದ ಸಿಯಾಳ.
ತೆಂಗಿನ ಮರಕ್ಕೆ ಲಗ್ಗೆಯಿಡುತ್ತಿರುವ ಕೆಂಚಳಿಲು. 
ಕೆಂಚಳಿಲು ( ಸಂಗ್ರಹ ಚಿತ್ರ )

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.