ಹೆಬ್ರಿ: ‘ಅಕ್ರಮವಾಗಿ ಸಂಪತ್ತು ಸಂಪಾದಿಸಿದರೆ ಅದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ. ಭಯ ಕಾಡುತ್ತಿರುತ್ತದೆ. ಉತ್ತಮ ಜೀವನ, ಉದ್ಯೋಗ, ಸಂಪಾದನೆ, ಸಂಪತ್ತನ್ನು ಉತ್ತಮ ಮಾರ್ಗದಲ್ಲಿ, ಕಾನೂನು ಪ್ರಕಾರ ಸಂಪಾದಿಸಿದರೆ ನೆಮ್ಮದಿಯ ಜೀವನ ದೊರೆಯುತ್ತದೆ’ ಎಂದು ಮಾಜಿ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಹೇಳಿದರು.
ಅವರು ಭಾನುವಾರ ಹೆಬ್ರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 5 ದಿನ ನಡೆದ ಗಣೇಶೋತ್ಸವ ಸುವರ್ಣ ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ತೃಪ್ತಿಯಿದ್ದರೆ ಎಲ್ಲವನ್ನೂ ನಿಗ್ರಹಿಸಲು ಸಾಧ್ಯವಾಗುತ್ತದೆ. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಸ್ವಾಗತಿಸುವ ಈ ಕಾಲದಲ್ಲಿ ನಮ್ಮ ಕಾಲದವರಿಂದ ಬದಲಾವಣೆ ಅಸಾಧ್ಯ. ವಿದ್ಯಾರ್ಥಿಗಳಿಗೆ ಈಗಿನ ವಾಸ್ತವ ಮನದಟ್ಟು ಮಾಡಿಸಿದಾಗ ಮುಂದೆ ಮಹಿಳೆಯರು, ಮಕ್ಕಳಿಂದ ಬದಲಾವಣೆ ತರಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಎಚ್. ಜನಾರ್ದನ್ ಅವರು ಗಣೇಶೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅವರನ್ನು ಗೌರವಿಸಲಾಯಿತು. ಗಣೇಶೋತ್ಸವ ಸಮಿತಿಯಲ್ಲಿ ಸೇವೆ ಸಲ್ಲಿಸಿ ನಿಧನರಾದ ಹಲವರಿಗೆ ‘ಸುವರ್ಣ ಸ್ಮೃತಿ’ ಗೌರವ ಸಮರ್ಪಣೆ ನಡೆಯಿತು. ಮಂಡ್ಯದ ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ ಅವರಿಗೆ ಸುವರ್ಣ ಪುರಸ್ಕಾರ ಪ್ರದಾನ ಮಾಡಲಾಯಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ಅಮರನಾಥ ಹೆಗ್ಡೆ, ಸ್ಥಾಪಕ ಕಾರ್ಯದರ್ಶಿ ಮೋಹನದಾಸ ನಾಯಕ್, ಪದಾಧಿಕಾರಿಗಳಾದ ಗಣೇಶ ನಾಯಕ್ ಮಂಗಳೂರು, ಕೆರೆದಂಡೆ ಲಕ್ಷ್ಮಣ ನಾಯಕ್, ರಾಜೀವ ಶೆಟ್ಟಿ ಕುಚ್ಚೂರು, ಚಂದ್ರಶೇಖರ ಹೆಗ್ಡೆ ಮುದ್ರಾಡಿ, ಕೆ.ಜಿ. ಗೋಪಾಲಕೃಷ್ಣ ಶಿರಿಯಾರ, ಎಚ್. ಗುಂಡೂ ನಾಯಕ್, ಎಚ್. ಭಾಸ್ಕರ ಜೋಯಿಸ್, ಪ್ರಕಾಶ ಮಲ್ಯ, ಗೋಕುಲದಾಸ ಶೆಣೈ ಉಡುಪಿ, ಶ್ರೀಕಾಂತ ಆಚಾರ್ಯ ಹೆಬ್ರಿ, ಶಶಿಧರ ಶೆಣೈ ಹೆಬ್ರಿ, ನಾಗಯ್ಯ ಶೆಟ್ಟಿ ಚಾರ, ಮನೋಹರ ಪ್ರಭು ಹೆಬ್ರಿ ಅವರನ್ನು ಗೌರವಿಸಲಾಯಿತು. ಅನ್ನದಾನದ ಸೇವಾದಾರರು, ಗಣೇಶೋತ್ಸವದ ವಿವಿಧ ಉಪ ಸಮಿತಿಗಳ ಸಂಚಾಲಕರು, ಪ್ರಮುಖರು, ಸದಸ್ಯರನ್ನು ಗೌರವಿಸಲಾಯಿತು.
ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಬೆಂಗಳೂರು ಉದ್ಯಮಿ ಎಂ ಕರುಣಾಕರ ಹೆಗ್ಡೆ, ಹೆಬ್ರಿಯ ಡಾ. ಭಾರ್ಗವಿ ಆರ್ ಐತಾಳ್, ಗಣೋಶೋತ್ಸವ ಸಮಿತಿ ಗೌರವಾಧ್ಯಕ್ಷ ಎಚ್. ಪ್ರವೀಣ್ ಬಲ್ಲಾಳ್, ಯೋಗೀಶ ಭಟ್, ಮಹಿಳಾ ಸಮಿತಿ, ಉಪ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಸಾದ್ ಶೆಟ್ಟಿ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್. ರಾಜೇಶ ಆಚಾರ್ಯ ಮಠದಬೆಟ್ಟು ವಂದಿಸಿದರು.
ವೈಭವದ ಪುರ ಮೆರವಣಿಗೆ:
ಮಧ್ಯಾಹ್ನ ಮಹಾಪೂಜೆ ಮಹಾ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಗಣೇಶೋತ್ಸವ ಸುವರ್ಣ ಸಂಭ್ರಮ ನೆನಪಿಗಾಗಿ ಗಣಪತಿ ದೇವರಿಗೆ ಚಿನ್ನ ಲೇಪಿತ ಕಿರೀಟ ಸಮರ್ಪಣೆ ನಡೆಯಿತು. ಹೆಬ್ರಿ ನಾಗರಾಜ ಜೋಯಿಸ್ ಸಹೋದರರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಮಹಾಪೂಜೆ ವಿಸರ್ಜನಾ ಪೂಜೆ ನಡೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಿಯ ಪ್ರಭಾವಳಿ ಸ್ವರ್ಣ ಕಿರೀಟ ಸಹಿತ ಗಣಪತಿ ದೇವರ ವಿಗ್ರಹದ ಭವ್ಯ ಪುರ ಮೆರವಣಿಗೆ ಶೋಭಾಯಾತ್ರೆ ನಡೆಯಿತು. ಆಕರ್ಷಕ ಟ್ಯಾಬ್ಲೊಗಳು ಹುಲಿವೇಷ ಚೆಂಡೆ ವಿವಿಧ ಕಲಾ ಪ್ರಕಾರಗಳ ವೇಷಭೂಷಣಗಳು ವಿಶೇಷ ಕಳೆ ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.