ಹೆಬ್ರಿ: ಹೆಬ್ರಿ– ಮಡಾಮಕ್ಕಿ ಮೂಲಕ ಕೊಲ್ಲೂರು ಸಂರ್ಪಕಿಸುವ ಹೆಬ್ರಿ– ಕುಚ್ಚೂರು– ಮಡಾಮಕ್ಕಿ ರಸ್ತೆಯ ಸಂಪರ್ಕ ಕಡಿತಗೊಂಡು ಹೆಬ್ರಿಗೆ ಬರುವ ಹಲವು ಗ್ರಾಮಗಳ ಜನರು ಸುತ್ತು ಬಳಸಿ ಬರಬೇಕಾದ ಸಂಕಷ್ಟ ಎದುರಾಗಿದೆ.
ಕಂಚರ್ಕಳ ಸೇತುವೆ ಬದಿಯಲ್ಲಿ ನೀರು ಹರಿದು ಹೋಗಲು ಪೈಪ್ ಹಾಕಿ ಬದಲಿ ವ್ಯವಸ್ಥೆ ಮಾಡಿದ್ದು, ಅದು ಮಳೆಗೆ ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂನ್ 17ರಂದು ಹೆಬ್ರಿ ತಾಲ್ಲೂಕಿಗೆ 10 ಗ್ರಾಮಗಳ ಸಂಪರ್ಕ ಕಡಿತಗೊಳ್ಳಲು ಕಾರಣರಾದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತೃತ್ವದಲ್ಲಿ ಹೆಬ್ರಿ ಪೇಟೆಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಘಟನೆಯ ಹಿನ್ನಲೆ: ಕೊಲ್ಲೂರು– ಹೆಬ್ರಿ– ಧರ್ಮಸ್ಥಳ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕುಚ್ಚೂರು ಕಂಚರ್ಕಳ ಎಂಬಲ್ಲಿ ಕಿರುಸೇತುವೆ ಹಲವು ವರ್ಷಗಳಿಂದ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಇಲ್ಲಿ ಸಂಪರ್ಕ ಕಡಿತಗೊಳ್ಳುತ್ತಿತ್ತು. ಸಾರ್ವಜನಿಕರ ಮನವಿಯ ಹಿನ್ನಲೆಯಲ್ಲಿ ₹2 ಕೋಟಿ ವೆಚ್ಚದ ಸೇತುವೆ ಮಂಜೂರುಗೊಂಡಿತ್ತು. ಮಳೆಗಾಲ ಸಮೀಪಿಸುತ್ತಿದ್ದಾಗಲೇ ಕಾಮಗಾರಿ ಕೈಗೆತ್ತುಕೊಂಡಿದ್ದರಿಂದ ಸಮಸ್ಯೆಯಾಗಿದೆ. ಹಳೆ ಸೇತುವೆ ತೆರವು ಮಾಡಿ ಅದೇ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಭಾರಿ ಮಳೆಗೆ ಬದಲಿ ವ್ಯವಸ್ಥೆ ಮಾಡಿದ ಪೈಪ್ ಸಹಿತ ಮಣ್ಣು ಕೊಚ್ಚಿ ಹೋಗಿ ಸಮಸ್ಯೆ ಎದುರಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಹೆಬ್ರಿ– ಕುಚ್ಚೂರು– ಮಡಾಮಕ್ಕಿ ರಸ್ತೆ ಸಂಪರ್ಕ ಕಡಿತವಾಗಿರುವುದರಿಮದ 10 ಗ್ರಾಮಗಳಿಗೆ ಸಂಪರ್ಕವೇ ಇಲ್ಲ. ಹೆಬ್ರಿಗೆ ಆ ಗ್ರಾಮಗಳ ಜನರು ಬರಬೇಕಾದರೆ ಸುಮಾರು 10– 12 ಕಿ.ಮೀ. ಸುತ್ತಿ ಬಳಸಿ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. 9 ತಿಂಗಳ ಹಿಂದೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಮಳೆಗಾಲ ಪ್ರಾರಂಭದ ಮೊದಲೇ ಕಾಮಗಾರಿ ನಡೆಸಿ ಎಂದು ಮನವಿ ಮಾಡಲಾಗಿತ್ತು. ಅವರ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಪೂಜಾರಿ ಕುಚ್ಚೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.