ADVERTISEMENT

‘ವಿವಿಧ ಸಾಮರ್ಥ್ಯ ಹೊಂದಿರುವ ವಿಶ್ವಕರ್ಮರು’

ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘ: ವಿಶ್ವಕರ್ಮ ಪೂಜಾ ಮಹೋತ್ಸವ, ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:23 IST
Last Updated 18 ಸೆಪ್ಟೆಂಬರ್ 2025, 4:23 IST
ಸಾಧಕ ವಿದ್ಯಾರ್ಥಿಗಳಾದ ಆಪ್ತಿ ಆಚಾರ್ಯ, ವಿನೀಶ್‌ ಆಚಾರ್ಯ, ನಾಟಿ ವೈದ್ಯೆ ಶಾರದಾ ಗಣಪತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು
ಸಾಧಕ ವಿದ್ಯಾರ್ಥಿಗಳಾದ ಆಪ್ತಿ ಆಚಾರ್ಯ, ವಿನೀಶ್‌ ಆಚಾರ್ಯ, ನಾಟಿ ವೈದ್ಯೆ ಶಾರದಾ ಗಣಪತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು   

ಹೆಬ್ರಿ: ‘ವಿಶ್ವಕರ್ಮ ಇಲ್ಲದೆ ಭೂಮಿಯಲ್ಲಿ ಏನೂ ಇಲ್ಲ. ಎಲ್ಲಾ ಸಾಮರ್ಥ್ಯ ಹೊಂದಿರುವ ವಿಶ್ವಕರ್ಮರು ಜನಮಾನ್ಯತೆ ಪಡೆದು ಸಮಾಜದ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವಕರ್ಮರು ಶ್ರೇಷ್ಠತೆ ಉಳಿಸಿಕೊಂಡು ಮುಖ್ಯವಾಹಿನಿಯಲ್ಲಿ ಇರಬೇಕು’ ಎಂದು ಕಟಪಾಡಿ ತೆಂಕ ಮಾಗಣೆ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತ ಮೋಕ್ತೇಸರ ನವೀನ್‌ ಆಚಾರ್ಯ ಹೇಳಿದರು.

ಅವರು ಮಂಗಳವಾರ ಇಲ್ಲಿನ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವಕರ್ಮ ಮಹಿಳಾ ಮಂಡಳಿ, ವಿಶ್ವಕರ್ಮ ಯುವ ವೃಂದ ಸಹಕಾರದಲ್ಲಿ ನಡೆದ 42ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವ, ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಹೆಬ್ರಿ ವಿಶ್ವಕರ್ಮ ಸಂಘದ ಶಿಸ್ತು, ಕಾರ್ಯಕ್ರಮದ ಆಯೋಜನೆ, ವಸ್ತ್ರ ಸಂಹಿತೆ, ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮಾಜದ ಮುಖಂಡ ಸಿಟಿ ಲಯನ್ಸ್‌ ಕ್ಲಬ್‌ನ ಟಿ.ಜಿ.ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮುದಾಯದವರು ಶಾಂತಿ ಪ್ರಿಯರು. ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಮುನ್ನಡೆಸುವ ಪ್ರಬುದ್ಧತೆ ಹೊಂದಿರುವವರು ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಅವರು ಸಂಘದ ಅಭಿವೃದ್ಧಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಎಳಗೋಳಿ ರವೀಂದ್ರ ಪುರೋಹಿತ್‌ ಹೆಬ್ರಿ ಪೌರೋಹಿತ್ಯದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ನೆರವೇರಿತು. ಸಾಧಕ ವಿದ್ಯಾರ್ಥಿಗಳಾದ ಆಪ್ತಿ ಆಚಾರ್ಯ ಮುನಿಯಾಲು, ವಿನೀಶ್‌ ಆಚಾರ್ಯ ಕೊಳಗುಡ್ಡೆ ಹೆಬ್ರಿ, ನಾಟಿ ವೈದ್ಯೆ ಶಾರದಾ ಗಣಪತಿ ಆಚಾರ್ಯ ಬೆಳಗುಂಡಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ಶಿಕ್ಷಕ ಶಶಿಶಂಕರ್‌ ಎಚ್‌.ಎಂ, ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಾಮಕೃಷ್ಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ವಿಶ್ವಕರ್ಮ ಮಹಿಳಾ ಮಂಡಳಿ ಉಪಾಧ್ಯಕ್ಷೆ ಅನುಷಾ, ಯುವ ವೃಂದದ ಅಧ್ಯಕ್ಷ ಸಂತೋಷ ಆಚಾರ್ಯ, ಗ್ರಾಮ ಮೋಕ್ತೇಸರ ಶೇಖರ ಆಚಾರ್ಯ, ಸಂಘದ ಗೌರವಾಧ್ಯಕ್ಷ ರತ್ನಾಕರ ಆಚಾರ್ಯ ಶಿವಪುರ, ಪದಾಧಿಕಾರಿಗಳು, ತಾಲ್ಲೂಕು ಕಚೇರಿ, ಭೂಮಾಪನಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಸದಸ್ಯ ರಾಜೇಶ ಆಚಾರ್ಯ ಮಠದಬೆಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಶಶಿಶಂಕರ್ ಎಚ್.ಎಂ. ನಿರೂಪಿಸಿದರು. ರತ್ನಾಕರ ಆಚಾರ್ಯ ಶಿವಪುರ ವಂದಿಸಿದರು. ಉಪಾಧ್ಯಕ್ಷ ಸದಾಶಿವ ಆಚಾರ್ಯ ರಾಗಿಹಕ್ಲು, ಸದಸ್ಯ ಪ್ರಶಾಂತ ಆಚಾರ್ಯ ಮಠದಬೆಟ್ಟು, ಮಹಿಳಾ ಮಂಡಳಿ ಗೌರವ ಸಲಹೆಗಾರ್ತಿ ಪ್ರೇಮಾ ಎಂ. ಸನ್ಮಾನಪತ್ರ  ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.