ADVERTISEMENT

ಹೆಗ್ಗುಂಜೆ ಅನಧಿಕೃತ ಮನೆ ತೆರವು ಪ್ರಕರಣ: ನ್ಯಾಯ ದೊರಕುವವರೆಗೆ ಹೋರಾಟ

ತಾಲ್ಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:27 IST
Last Updated 14 ಜನವರಿ 2026, 6:27 IST
ಬ್ರಹ್ಮಾವರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದ ಶ್ರೀನಿವಾಸ ಪೂಜಾರಿ ಮಾತನಾಡಿದರು
ಬ್ರಹ್ಮಾವರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಬ್ರಹ್ಮಾವರ: ಪ್ರಜಾಪ್ರಭುತ್ವದ ವ್ಯವಸ್ಥೆಯೇ ಬುಡಮೇಲಾಗಿದೆ. ಬಡವರ ಹಕ್ಕುಗಳನ್ನು ಕಾಯುವ ತಾಲ್ಲೂಕು ಆಡಳಿತ ಕಚೇರಿ ಬಡವರ ಮನೆ ಧ್ವಂಸ ಗೊಳಿಸಿರುವುದು ವಿಪರ್ಯಾಸ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹೆಗ್ಗುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರ್ಜೆಡ್ಡು ಎಂಬಲ್ಲಿ ಸರ್ಕಾರಿ ಸ್ಥಳದಲ್ಲಿ ನಿರ್ಮಿಸಲಾದ ಮನೆ ತೆರವುಗೊಳಿಸಿದನ್ನು ಪ್ರಶ್ನಿಸಿ ಬ್ರಹ್ಮಾವರ ತಾಲ್ಲೂಕು ಆಡಳಿತ ಸೌಧದ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸೋಮವಾರ ಜೆಸಿಬಿ ತಂದು ಅಲ್ಲಿದ್ದ ಎಲ್ಲ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಕೋಟಿಗಟ್ಟಲೆ ವೆಚ್ಚಮಾಡಿ ಮನೆ ಕಟ್ಟಿಕೊಂಡವರಿದ್ದಾರೆ. ಆದರೆ, 20 ವರ್ಷಗಳಿಗೂ ಮಿಕ್ಕಿ ವಾಸ್ತವ್ಯ ಇದ್ದ ಮನೆಗಳನ್ನು ಕೆಡವಿದ್ದು ನಿಜಕ್ಕೂ ಆಕ್ಷೇಪಾರ್ಹ. ಸರ್ಕಾರ ಕೂಡಲೇ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು.ನ್ಯಾಯ ಒದಗಿಸುವ ತನಕ ನಮ್ಮ ಹೋರಾಟ ಮುಂದುವರಿಯುವುದು ಎಂದು ಹೇಳಿದರು.

ADVERTISEMENT

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನೈತಿಕತೆ ಇಲ್ಲದ ಭ್ರಷ್ಟ ಅಧಿಕಾರಿ ಕಾನೂನಿನ ಬಗ್ಗೆ ಮಾತನಾಡುತ್ತಾರೆ. ಸಂತ್ರಸ್ತೆ ದೇವಕಿ ನಾಯ್ಕ ಅವರಿಗೆ ನ್ಯಾಯ ಒದಗಿಸಿ ಜಾಗದ ಹಕ್ಕುಪತ್ರ ನೀಡಿ. ನಾವೆಲ್ಲ ಒಗ್ಗಟ್ಟಾಗಿ ವಂತಿಗೆ ಹಾಕಿಯಾದರೂ ಮನೆ ನಿರ್ಮಿಸಿ ಕೊಡುತ್ತೇವೆ ಎಂದ ಅವರು, ನ್ಯಾಯ ಸಿಗುವ ತನಕ ಸ್ಥಳವನ್ನು ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದರು.

ಬಿಜೆಪಿ ಬ್ರಹ್ಮಾವರ ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್, ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಬ್ರಹ್ಮಾವರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ ಶೆಟ್ಟಿ, ಗುರುಪ್ರಸಾದ ನೀರ್ಜೆಡ್ಡು, ತಹಶೀಲ್ದಾರ್ ಅವರ ಆಡಳಿತ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಕುಡುಬಿ ಸಮಾಜದ ಜಿಲ್ಲಾ ಸಂಘಟನಾ ಅಧ್ಯಕ್ಷ ಪ್ರಭಾಕರ ನಯ್ಕ, ಹೆಗ್ಗುಂಜೆ ಗ್ರಾಮ ಸಮಿತಿ ಸದಸ್ಯ ಗುರುಪ್ರಸಾದ ನೀರ್ಜೆಡ್ಡು, ಬಿ.ಎನ್.ಶಂಕರ ಪೂಜಾರಿ, ವಿಠಲ ಪೂಜಾರಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಮುಖಂಡ ಹರಿಮಕ್ಕಿ ರತ್ನಾಕರ ಶೆಟ್ಟಿ, ಸುರೇಶ ಶೆಟ್ಟಿ ಕಾಡೂರು, ಉಮೇಶ ನಾಯ್ಕ, ದೇವಾನಂದ ಬ್ರಹ್ಮಾವರ, ಕಮಲಾಕ್ಷ ಹೆಬ್ಬಾರ, ನಳಿನಿ ಪ್ರದೀಪ್ ರಾವ್, ಸಂತ್ರಸ್ಥೆ ದೇವಕಿ ನಾಯ್ಕ, ಪರಿಸರದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಹೆಗ್ಗುಂಜೆ ಗ್ರಾಮಸ್ಥರು ಇದ್ದರು.

ಈ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿದ್ದು ಭೂ ಕಬಳಿಕೆ ಪ್ರಕರಣ ದಾಖಲಾಗಿರುವುದರಿಂದ ನಾವು ಸರ್ಕಾರ ಆದೇಶ ಪ್ರಕಾರ ಮನೆ ತೆರವುಗೊಳಿಸಿದ್ದೇವೆ.
– ಶ್ರೀಕಾಂತ ಹೆಗ್ಡೆ, ಬ್ರಹ್ಮಾವರ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.