
ಪಡುಬಿದ್ರಿ: ಹೆಜಮಾಡಿ ಕಡಲ ಕಿನಾರೆಯಲ್ಲಿ ಸೋಮವಾರ ಸಂಜೆ ರಾಶಿ ರಾಶಿ ಬೂತಾಯಿ ಮೀನುಗಳು ದಡ ಸೇರಿದ್ದು, ಮೀನು ಪ್ರಿಯರು ತಂಡೋಪತಂಡವಾಗಿ ಬಂದು ಕೊಂಡೊಯ್ದಿದ್ದಾರೆ.
ವೀರಾಂಜನೇಯ ಕೈರಂಪಣಿ ಫಂಡ್ ಮೀನುಗಾರಿಕಾ ತಂಡದ ಸದಸ್ಯರು ಎರ್ಮಾಳಿನಿಂದ ಬಂದು ಹೆಜಮಾಡಿಯಲ್ಲಿ ಬಲೆ ಬೀಸಿದ್ದರು. ಹೆಜಮಾಡಿಯ ಅಮಾವಾಸ್ಯೆಕರಿಯ ಕಡಲ ಕಿನಾರೆಯಲ್ಲಿ ಕೈರಂಪಣಿ ಬಲೆಗಳಿಗೆ ಸಿಕ್ಕಿ ಬಲೆಯನ್ನು ದಡಕ್ಕೆ ಎಳೆಯುತ್ತಿದ್ದಂತೆ ಸಣ್ಣ ಗಾತ್ರದ ರಾಶಿ ರಾಶಿ ಬೂತಾಯಿ ಮೀನುಗಳು ಅಲೆಗಳ ರಭಸಕ್ಕೆ ದಡ ಸೇರಿವೆ. ತಂಡಕ್ಕೆ ಸುಮಾರು 20 ಟನ್‌ಗಳಷ್ಟು ಮೀನುಗಳು ಸಿಕ್ಕಿದ್ದು, ಬಲೆ ಒಡೆದು ಕಡಲ ರಭಸಕ್ಕೆ ಸಿಲುಕಿ ದಡ ಸೇರಿವೆ.
ಸುದ್ದಿ ತಿಳಿದು ವಿವಿಧ ಭಾಗಗಳಿಂದ ನೂರಾರು ಜನರು ರಾತ್ರಿ ವೇಳೆ ಸಮುದ್ರ ತೀರಕ್ಕೆ ಬಂದು ಚೀಲಗಳಲ್ಲಿ ಮೀನುಗಳನ್ನು ಒಯ್ದಿದ್ದಾರೆ. ಕೆಲವರು ಅಲ್ಲಿಯೇ ವ್ಯಾಪಾರ ನಡೆಸಿದ್ದಾರೆ. ಬೂತಾಯಿ ಮೀನುಗಳಿಗೆ ಫಿಶ್‌ಮಿಲ್‌ಗಳಲ್ಲಿ ಭಾರಿ ಬೇಡಿಕೆ ಇದ್ದು, ಇಲ್ಲಿಂದ ಟನ್‌ಗಟ್ಟಲೆ ಮೀನುಗಳನ್ನು ವಾಹನಗಳಲ್ಲಿ ಸಾಗಿಸಲಾಗಿದೆ.
ಹೆಜಮಾಡಿ, ಸುತ್ತಮುತ್ತ ಊರಿನ ಮಾರುಕಟ್ಟೆಯಲ್ಲಿ ಮಂಗಳವಾರ ಬೂತಾಯಿ ಮೀನಿನದೇ ಸುದ್ದಿಯಾಗಿತ್ತು. ರಾಶಿ ಮೀನಿಗೆ ₹350ರಂತೆ ಮಾರಾಟವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.