ADVERTISEMENT

ಹಿಜಾಬ್ ವಿವಾದದಲ್ಲಿ ತಾಳ್ಮೆ ಪರೀಕ್ಷೆ ಬೇಡ: ಯಶ್‌ಪಾಲ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 15:15 IST
Last Updated 28 ಜನವರಿ 2022, 15:15 IST
ಯಶ್‍ಪಾಲ್ ಸುವರ್ಣ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ
ಯಶ್‍ಪಾಲ್ ಸುವರ್ಣ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ   

ಉಡುಪಿ: ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬೆರಳೆಣಿಕೆಯ ವಿದ್ಯಾರ್ಥಿನಿಯರು ಮತೀಯವಾದಿ ಸಂಘಟನೆಗಳ ಕುಮ್ಮಕ್ಕಿನಿಂದ ತರಗತಿಯಲ್ಲಿ ಹಿಜಾಬ್ ಧರಿಸಿ ವಿವಾದ ಸೃಷ್ಟಿಸಿ ಕಾಲೇಜಿನ ಶೈಕ್ಷಣಿಕ ವಾತಾವರಣ ಹದಗೆಡಿಸಲು ಯತ್ನಿಸುತ್ತಿದ್ದು, ತಾಳ್ಮೆ ಪರೀಕ್ಷೆಗೆ ಮುಂದಾಗಿದ್ದು, ಮುಂದೆ ದಿಟ್ಟ ಉತ್ತರ ನೀಡುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಕಾಲೇಜಿನ ಹಿತದೃಷ್ಟಿಯಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಯಮದಿಂದ ಸಮಸ್ಯೆ ಬಗೆಹರಿಸಲು ಕಾಲೇಜು ಅಭಿವೃದ್ಧಿ ಸಮಿತಿ ಯತ್ನಿಸುತ್ತಿದ್ದು, ಇದನ್ನೇ ದೌರ್ಬಲ್ಯವೆಂದು ಭಾವಿಸಿರುವ ಮತೀಯವಾದಿಗಳು ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಾಧ್ಯಮಗಳ ಮೂಲಕ ಘಟನೆಯನ್ನು ವೈಭವೀಕರಿಸಿ ಕಾಲೇಜಿನ ಘನತೆಗೆ ಧಕ್ಕೆತರಲು ಯತ್ನಿಸುತ್ತಿದ್ದಾರೆ.

ಈಗಾಗಲೇ ಶಿಕ್ಷಣ ಇಲಾಖೆ ಕಾಲೇಜಿನ ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಸುವಂತೆ ಆದೇಶ ನೀಡಿದ್ದರೂ ವಿದ್ಯಾರ್ಥಿಗಳು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರದೃಷ್ಟಕರ. ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ರಘುಪತಿ ಭಟ್ ಅವರು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಲು ಅವಕಾಶ ನೀಡಿದರೂ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸದೆ ಉದ್ಧಟತನ ಮೆರೆದಿದ್ದಾರೆ ಎಂದು ಯಶ್‌ಪಾಲ್ ಟೀಕಿಸಿದ್ದಾರೆ.

ADVERTISEMENT

ಡಿ.30ರಂದು ಕಾಪು ಪುರಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಪಕ್ಷ 3 ಸ್ಥಾನ ಗೆದ್ದ ಮರುದಿನವೇ ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭವಾಗಿದೆ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಈ ಘಟನೆಯನ್ನು ವ್ಯವಸ್ಥಿತವಾಗಿ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರಗೊಳಿಸಿ ರಾಜಕೀಯ ಲಾಭ ಪಡೆಯಲು ಸಂಘಟನೆಗಳು ಯತ್ನಿಸುತ್ತಿವೆ.

ಕಾಲೇಜಿನ ಉಪನ್ಯಾಸಕರಿಗೆ ಅಗೌರವ ತೋರುತ್ತಾ, ಅಶಿಸ್ತಿನಿಂದ ವರ್ತಿಸುತ್ತಿರುವ ವಿದ್ಯಾರ್ಥಿನಿಯರಿಂದಾಗಿ ಕಾಲೇಜಿನಲ್ಲಿ ಓದುತ್ತಿರುವ ಸಾವಿರಾರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ ಉಂಟಾಗಿದೆ. ವಿದ್ಯೆ ಕಲಿಸುವ ಗುರುಗಳ ಬಗ್ಗೆ ಅಗೌರವ ತೋರುವ ವಿದ್ಯಾರ್ಥಿಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅಸಾಧ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಮತೀಯವಾದಿಗಳಿಗೆ ಕಾಲೇಜಿನ ಶಿಕ್ಷಣದ ವಿಚಾರದಲ್ಲಿ ಗೊಂದಲ ಸೃಷ್ಟಿಸಲು ಅವಕಾಶ ನೀಡುವುದಿಲ್ಲ. ಕಾಲೇಜಿನ ಶಿಸ್ತು ಕಾಪಾಡುವ ವಿಚಾರದಲ್ಲಿ ರಾಜೀ ಪ್ರಶ್ನೆಯೇ ಇಲ್ಲ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.