ADVERTISEMENT

ಉಡುಪಿ: ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನ

‘ಪುಸ್ತಕಗಳನ್ನು ಪುನರ್ ಮುದ್ರಣಗೊಳಿಸಿ ಜನರಿಗೆ ತಲುಪಿಸುವ ಕಾರ್ಯವಾಗಲಿ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:15 IST
Last Updated 28 ಜುಲೈ 2025, 7:15 IST
ಬ್ರಹ್ಮಾವರ ರೋಟರಿ ಭವನದಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಟಾನ ಹಾಗೂ ಜಿಲ್ಲಾ ಜಾಗೃತಿ ಸಮಿತಿ ರಚನೆಯ ಪೂರ್ವಭಾವಿ ಸಭೆಗೆ ಪುಸ್ತಕ ಹಸ್ತಾಂತರಿಸಿ ಚಾಲನೆ ನೀಡಲಾಯಿತು.
ಬ್ರಹ್ಮಾವರ ರೋಟರಿ ಭವನದಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಟಾನ ಹಾಗೂ ಜಿಲ್ಲಾ ಜಾಗೃತಿ ಸಮಿತಿ ರಚನೆಯ ಪೂರ್ವಭಾವಿ ಸಭೆಗೆ ಪುಸ್ತಕ ಹಸ್ತಾಂತರಿಸಿ ಚಾಲನೆ ನೀಡಲಾಯಿತು.   

ಬ್ರಹ್ಮಾವರ: ‘ರಾಮಾಯಣ, ಮಹಾಭಾರತ, ಭಗವದ್ಗೀತೆ ಪುಸ್ತಕಗಳು ಪ್ರಪಂಚದಲ್ಲೇ ಅತಿ ಅಮೂಲ್ಯ ಗ್ರಂಥಗಳಲ್ಲಿ ಸೇರಿದ್ದು, ಪ್ರತಿ ಮನೆಯಲ್ಲೂ ಇರಿಸಿಕೊಳ್ಳಬೇಕು. ನಶಿಸಿ ಹೋಗುತ್ತಿರುವ ಪುಸ್ತಕಗಳನ್ನು ಪುನರ್ ಮುದ್ರಣಗೊಳಿಸಿ ಜನರಿಗೆ ತಲುಪಿಸುವ ಕಾರ್ಯ ಕನ್ನಡ ಪುಸ್ತಕ ಪ್ರಾಧಿಕಾರ ಮಾಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸ್ಥಾಪಕಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.

ಇಲ್ಲಿನ ರೋಟರಿ ಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ, ಕಸಾಪ ಜಿಲ್ಲಾ ಘಟಕ, ರೋಟರಿ ಕ್ಲಬ್, ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಅನುಷ್ಠಾನ, ಜಿಲ್ಲಾ ಜಾಗೃತಿ ಸಮಿತಿ ರಚನೆಯ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮನೆಗೊಂದು ಗ್ರಂಥಾಲಯ ಕರಪತ್ರ ಬಿಡುಗಡೆ ಮಾಡಿದ ಸಾಂಸ್ಕೃತಿಕ ಚಿಂತಕ ಕೆ.ಪಿ.ರಾವ್ ಅವರು, ಆಧುನಿಕ ತಂತ್ರಜ್ಞಾನದಿಂದಾಗಿ ಪುಸ್ತಕಗಳು ಜನರ ಮನಸ್ಸಿನಿಂದ ದೂರವಾಗುತ್ತಿರುವ ಕಾರಣ ಅಲ್ಲಿಯೂ ತಂತ್ರಜ್ಞಾನದ ಬಳಕೆಯಾಗಬೇಕು. ಲಿಖಿತ ಪುಸ್ತಕಗಳು, ಮಾತನಾಡುವ ಪುಸ್ತಕಗಳು, ಮುಂದೆ ಅನಿಮೇಷನ್‌ನಂತಹ ಪುಸ್ತಕಗಳು ಬರಬಹುದು. ಆದ್ದರಿಂದ ಪುಸ್ತಕಗಳ ರೂಪ ಬದಲಾಗಬೇಕು ಎಂದರು.

ADVERTISEMENT

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್‌ ಅಧ್ಯಕ್ಷ ಸತೀಶ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ, ರೋಟರಿ ಕಾರ್ಯದರ್ಶಿ ರೆಕ್ಸನ್ ಮೋನಿಸ್ ಭಾಗವಹಿಸಿದ್ದರು. ಮಾನಸ ಅವರನ್ನು ಗೌರವಿಸಲಾಯಿತು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು. ಕಸಾಪ ಕಾರ್ಕಳ ತಾಲ್ಲೂಕು ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಂದಿಸಿದರು.

ಒಂದನೇ ತರಗತಿ ಕನ್ನಡ ಪುಸ್ತಕಗಳ ಪ್ರಯೋಗ ಶಾಲೆಯಾಗಬೇಕು. ಕಸಾಪ ಜಿಲ್ಲಾ ಘಟಕ ಓದುಗರಲ್ಲಿ ಯುವಜನರು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿದೆ
- ಸುರೇಂದ್ರ ಅಡಿಗ ನೀಲಾವರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

‘ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ’

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ ಮನೆಗಳಲ್ಲಿ ಪೂಜಾ ಮಂದಿರಗಳ ಜೊತೆಗೆ ಜ್ಞಾನ ಮಂದಿರವೂ ಅಗತ್ಯವಾಗಿ ಆಗಬೇಕು. ಮನೆಗಳಿಗೆ ಪುಸ್ತಕಗಳನ್ನು ತಲುಪಿಸುವ ಯೋಜನೆಯೇ ಮನೆಗೊಂದು ಗ್ರಂಥಾಲಯ. ಇಂದಿನ ಮೊಬೈಲ್ ಯುಗದಿಂದ ಪುಸ್ತಕಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಮನೆಮನೆಗೆ ಪುಸ್ತಕ ತಲುಪಿಸುವ ಕೆಲಸವಾಗಬೇಕು. ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ಗುರಿ ಇದೆ. 500 ಪುಸ್ತಕಗಳು ಆ ಗ್ರಂಥಾಲಯದಲ್ಲಿರಬೇಕು ಎನ್ನುವುದು ನಮ್ಮ ಯೋಜನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.