ADVERTISEMENT

ವ್ಯಸನ ಮುಕ್ತವಾದರೆ ವಿಷ ಮುಕ್ತ ಸಮಾಜ ನಿರ್ಮಾಣ: ಡಾ.ಪಿ.ವಿ.ಭಂಡಾರಿ

ನಶೆ, ಯುವಜನತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 13:53 IST
Last Updated 22 ಫೆಬ್ರುವರಿ 2023, 13:53 IST
ಉಡುಪಿ ನೇತ್ರ ಜ್ಯೋತಿ ಕಾಲೇಜು, ಭಾರತೀಯ ವೈದ್ಯಕೀಯ ಮಂಡಳಿ ಮತ್ತು ಲಯನ್ಸ್‌ ಕ್ಲಬ್‌ ಉಡುಪಿ ಜಂಟಿಯಾಗಿ ನಗರದ ಲಯನ್ಸ್‌ ಭವನದಲ್ಲಿ ಆಯೋಜಿಸಿದ್ದ ‘ನಶೆ ಮತ್ತು ಯುವಜನತೆ’ ಜಾಗೃತಿ ಕಾರ್ಯಕ್ರಮವನ್ನು ಡಾ.ಕೃಷ್ಣಪ್ರಸಾದ್ ಉದ್ಘಾಟಿಸಿದರು.
ಉಡುಪಿ ನೇತ್ರ ಜ್ಯೋತಿ ಕಾಲೇಜು, ಭಾರತೀಯ ವೈದ್ಯಕೀಯ ಮಂಡಳಿ ಮತ್ತು ಲಯನ್ಸ್‌ ಕ್ಲಬ್‌ ಉಡುಪಿ ಜಂಟಿಯಾಗಿ ನಗರದ ಲಯನ್ಸ್‌ ಭವನದಲ್ಲಿ ಆಯೋಜಿಸಿದ್ದ ‘ನಶೆ ಮತ್ತು ಯುವಜನತೆ’ ಜಾಗೃತಿ ಕಾರ್ಯಕ್ರಮವನ್ನು ಡಾ.ಕೃಷ್ಣಪ್ರಸಾದ್ ಉದ್ಘಾಟಿಸಿದರು.   

ಉಡುಪಿ: ಗಾಂಜಾ, ಅಫೀಮು, ಚರಸ್‌, ಮೊರ್ಪಿನ್‌, ಕೆಟಾಮಿನ್‌, ಅಲ್ಕೋಹಾಲ್‌, ತಂಬಾಕು ಸೇರಿದಂತೆ ಮಾದಕ ಪದಾರ್ಥಗಳ ಸೇವನೆಯಿಂದ ಯುವಜನಯೆಯ ಜೀವನವೂ ವಿಷಮಯವಾಗಿದೆ ಎಂದು ಉಡುಪಿ-ಕರಾವಳಿ ಭಾರತೀಯ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಹೇಳಿದರು.

ಉಡುಪಿ ನೇತ್ರ ಜ್ಯೋತಿ ಕಾಲೇಜು, ಭಾರತೀಯ ವೈದ್ಯಕೀಯ ಮಂಡಳಿ ಮತ್ತು ಲಯನ್ಸ್‌ ಕ್ಲಬ್‌ ಉಡುಪಿ ಜಂಟಿಯಾಗಿ ನಗರದ ಲಯನ್ಸ್‌ ಭವನದಲ್ಲಿ ಆಯೋಜಿಸಿದ್ದ ನಶೆ ಮತ್ತು ಯುವಜನತೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಯುವಜನತೆಯನ್ನು ಮಾದಕ ವ್ಯಸನಗಳಿಂದ ದೂರ ಇರಿಸದೆ ಹೋದರೆ ಬದುಕು ಸರ್ವನಾಶವಾಗುತ್ತದೆ. ದೇಶದ ಭವಿಷ್ಯವೂ ಕತ್ತಲಿನ ಹಾದಿಗೆ ಮರಳುತ್ತದೆ. ಅಮಲು ಪದಾರ್ಥ ಸೇವನೆಯಿಂದ ಕ್ಷಣ ಮಾತ್ರ ಸುಖದ ಭ್ರಮಾಲೋಕದಲ್ಲಿ ವಿಹರಿಸಬಹುದು. ಅಮಲು ಪದಾರ್ಥ ಹವ್ಯಾಸವಾಗಿ ಬದಲಾದರೆ ಭ್ರಮಾಲೋಕದಲ್ಲಿ ವಿಹರಿಸುತ್ತಿರುವಾಗಲೇ ಕ್ಯಾನ್ಸರ್‌, ಹೃದ್ರೋಗ, ನರರೋಗ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸಿಲುಕಿ ನರಕ ಲೋಕವೆಂಬ ವಾಸ್ತವಕ್ಕೆ ಮರಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಈಚೆಗೆ ವಿವಿಧ ರೀತಿ ಅಮಲು ಪದಾರ್ಥಗಳಿಗೆ ಪ್ರತಿಯೊಬ್ಬರೂ ದಾಸರಾಗಿಬಿಟ್ಟಿದ್ದೇವೆ. ಕೆಲವರು ಬ್ರೆಡ್‌ಗೆ ಐಯೋಡೆಕ್ಸ್‌ ಹಚ್ಚಿ ಸೇವಿಸುತ್ತಾರೆ. ಫೆವಿಬಾಂಡ್‌, ಪೆಟ್ರೋಲ್‌ ವಾಸನೆಯನ್ನು ಎಳೆದು ಖುಷಿ ಪಡುತ್ತಾರೆ. ಆರಂಭದಲ್ಲಿ ಸಂತೋಷ ನೀಡುವ ಚಟ ನಂತರ ಬದುಕನ್ನೇ ಸರ್ವನಾಶ ಮಾಡುತ್ತದೆ ಎಂದರು.

ಮಾದಕ ವ್ಯಸನದಿಂದ ದೂರವಿರಲು ದೃಢ ಸಂಕಲ್ಪ ಮಾಡಬೇಕು. ಮೋಜಿಗಾಗಿಯೂ ಮದ್ಯ ಸೇವಿಸಬಾರದು. ವ್ಯಸನಗಳಿಗೆ ಬೇಡ ಎಂಬ ಅಸ್ತ್ರ ಉಪಯೋಗಿಸಬೇಕು. ವ್ಯಸನಕ್ಕೆ ಅಂಡಿಕೊಂಡಿರುವವರು ಚಟ ಮುಕ್ತ ಶಿಬಿರಕ್ಕೆ ಹೋಗಿ ವೈದ್ಯರ ಸಲಹೆ ಸೂಚನೆಯನ್ನು ಪಾಲಿಸಿ ಸುಂದರ ಬದುಕು ರೂಪಿಸಿಕೊಳ್ಳಬೇಕು ಎಂದು ಡಾ.ಪಿ.ವಿ.ಭಂಡಾರಿ ಸಲಹೆ ನೀಡಿದರು.

ಭಾರತೀಯ ವೈದ್ಯಕೀಯ ಮಂಡಳಿಯ ಮಾಜಿ ಜಿಲ್ಲಾ ಸಂಯೋಜಕ ಡಾ. ವ್ಯೆ.ಎಸ್‌.ರಾವ್‌ ಮಾತನಾಡಿ, ಮದ್ಯ, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣ ಪ್ರಸಾದ್‌ ಮದ್ಯವ್ಯಸನ ಎಂಥವರನ್ನೂ ರಾಕ್ಷಸ ಬಾಹುಗಳಲ್ಲಿ ಬಂಧಿಯಾಗಿಸಿ ಜೀವನವನ್ನು ನಾಶ ಮಾಡುತ್ತದೆ. ಕೆಟ್ಟ ಹವ್ಯಾಸಗಳಿಂದ ದೂರವಿರಲು ಜೀವನದಲ್ಲಿ ಸತ್‌ಕ್ರಿಯೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.

ದೇಶದಲ್ಲಿ ಕೋಟ್ಯಂತರ ಮಂದಿ ದುಶ್ಚಟಗಳಿಗೆ ದಾಸರಾಗಿದ್ದಾರೆ. ಅವರೆಲ್ಲರನ್ನು ಚಟಮುಕ್ತವಾಗಿಸಲು ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಯು.ಎಸ್‌.ರವಿರಾಜ್‌ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಡಾ. ಕೇಶವ ನಾಯಕ್‌, ಲಯನ್ಸ್‌ ಕ್ಲಬ್‌ ಅಧ್ಯಕ್ಷ ದಿವಾಕರ್‌ ಶೆಟ್ಟಿ, ಖಜಾಂಚಿ ವಿಜಯ ಕುಮಾರ್‌ ಮುದ್ರಾಡಿ, ನೇತ್ರ ಜ್ಯೋತಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್‌, ಆಡಳಿತಾಧಿಕಾರಿ ಅಬ್ದುಲ್‌ ಖಾದರ್‌, ಪ್ರಾಂಶುಪಾಲ ರಾಜಿಬ್‌ ಮಂಡಲ್‌, ಮುಖ್ಯ ಶೈಕ್ಷಣಿಕ ಸಂಯೋಜಕ ಬಾಲಕೃಷ್ಣ ಪರ್ಕಳ ಇದ್ದರು.

ವಿದ್ಯಾರ್ಥಿನಿಯ ಇಝ್ನಾ ಸ್ವಾಗತಿಸಿದದರು. ಶಾಂಭವಿ ವಂದಿಸಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.