ADVERTISEMENT

ಉದ್ಯಾವರ ಕುದ್ರುವಿನಲ್ಲಿ ಅಕ್ರಮ ಮರಳು ಗಣಿಗಾರಿಕೆ: ಶ್ರೀಗಳಿಂದ ಹೋರಾಟ ಎಚ್ಚರಿಕೆ

ಮರಳು ಮಾಫಿಯಾ ನಿಲ್ಲದಿದ್ದರೆ ಹೋರಾಟ: ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 18:48 IST
Last Updated 18 ಮಾರ್ಚ್ 2023, 18:48 IST
ಪಾಪನಾಶಿನಿ ಹೊಳೆಯ ತೀರದಲ್ಲಿ ಮರಳು ತೆಗೆಯಲು ನಿರ್ಮಿಸಿರುವ ದಕ್ಕೆ
ಪಾಪನಾಶಿನಿ ಹೊಳೆಯ ತೀರದಲ್ಲಿ ಮರಳು ತೆಗೆಯಲು ನಿರ್ಮಿಸಿರುವ ದಕ್ಕೆ   

ಉಡುಪಿ: ಉದ್ಯಾವರ ಸೇತುವೆ ಸಮೀಪದ ಪಾಪನಾಶಿನಿ ಹೊಳೆಯ ತೀರದಲ್ಲಿ ಪ್ರಾಕೃತಿಕವಾಗಿ ಸಮೃದ್ಧವಾಗಿರುವ ಪುಟ್ಟ ಗ್ರಾಮ ಉದ್ಯಾವರ ಕುದ್ರುವಿನಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಕೂಡಲೇ ಮರಳು ಮಾಫಿಯಾಗೆ ಕಡಿವಾಣ ಬೀಳದಿದ್ದರೆ ಬೃಹತ್ ಹೋರಾಟ ನಡೆಯಲಿದೆ ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಎಚ್ಚರಿಕೆ ನೀಡಿದರು.

‘ದಶಕಗಳ ಹಿಂದೆ ಪ್ರತಿ ವರ್ಷ ಮಳೆಗಾಲದಲ್ಲಿ ಪಾಪನಾಶಿನಿ ಹೊಳೆಯಲ್ಲಿ ಜಮೆಯಾಗುತ್ತಿದ್ದ ಮರಳನ್ನು ಸ್ಥಳೀಯರು ಸಾಂಪ್ರದಾಯಿಕವಾಗಿ ಹೊರ ತೆಗೆಯುತ್ತಿದ್ದರು. ಇದರಿಂದ ಪ್ರಕೃತಿಗೆ ಹಾನಿಯಾಗುತ್ತಿರಲಿಲ್ಲ. ಈಚೆಗೆ ಮರಳು ಗಣಿಗಾರಿಕೆ ಗುತ್ತಿಗೆಯನ್ನು ಪ್ರಭಾವಿಗಳು ಪಡೆದುಕೊಂಡಿದ್ದು, ಹಣದಾಸೆಗೆ ನಿಯಮ ಉಲ್ಲಂಘಿಸಿ ಅಪಾರ ಪ್ರಮಾಣದ ಮರಳನ್ನು ಹೊರತೆಗೆಯಲಾಗುತ್ತಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‌ರಾತ್ರಿ ಹೊತ್ತು ಹೊರ ರಾಜ್ಯಗಳ ಕಾರ್ಮಿಕರನ್ನು ಬಳಸಿಕೊಂಡು ನಿರಂತರವಾಗಿ ಮರಳು ತೆಗೆಯಲಾಗುತ್ತದೆ. ಹೊಳೆಯ ಒಡಲಿನಲ್ಲಿ 15 ಅಡಿಗೂ ಹೆಚ್ಚಿನ ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಕ್ರಮೇಣ ಇಡೀ ಗ್ರಾಮವನ್ನು ಹೊಳೆ ಆಹುತಿ ತೆಗೆದುಕೊಳ್ಳುವ ಭೀತಿ ಎದುರಾಗಲಿದೆ ಎಂದರು.

ADVERTISEMENT

ಸಾಮಾಜಿಕ ಹೋರಾಟಗಾರ ಪ್ರಕಾಶ್ ಮಲ್ಪೆ ಮಾತನಾಡಿ, ನದಿ ವ್ಯಾಪ್ತಿಯ 5ಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮವಾಗಿ ಧಕ್ಕೆಗಳನ್ನು ನಿರ್ಮಾಣ ಮಾಡಿ ಮರಳು ತೆಗೆದು ಸಾಗಿಸಲಾಗುತ್ತಿದೆ. ಇದರಿಂದ ಶಬ್ದಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಗ್ರಾಮಸ್ಥರು ಪ್ರತಿದಿನ ನಿದ್ರೆಯಿಲ್ಲದೆ ರಾತ್ರಿಗಳನ್ನು ಕಳೆಯಬೇಕಾಗಿದೆ. ಹಸಿರಿನಿಂದ ಕಂಗೊಳಿಸುತ್ತಿದ್ದ ಊರು ಧೂಳಿನಿಂದ ಮುಚ್ಚಿಹೋಗಿದೆ. ಮರಳಿನ ಗಣಿಗಾರಿಕೆ ಮುಂದುವರಿದರೆ ನದಿಯ ಮೇಲೆ ನಿರ್ಮಿಸಿರುವ ರೈಲ್ವೇ ಬ್ರಿಡ್ಜ್ ಕುಸಿದು ಬೀಳುವ ಅಪಾಯ ಇದೆ ಎಂದರು.

ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್‌, ಭಜನಾ ಮಂಡಳಿ ಅಧ್ಯಕ್ಷ ಸದಾನಂದ ಕುಂದರ್‌, ಪುರುಷೋತ್ತಮ ಅಡ್ವೆ ಇದ್ದರು.

ಭೂಕುಸಿತ ಭೀತಿ
10 ವರ್ಷಗಳ ಹಿಂದೆ 10 ರಿಂದ 15 ಕುಟುಂಬಗಳು ಸಾಂಪ್ರದಾಯಕವಾಗಿ ಮರಳು ತೆಗೆದು ಜೀವನ ನಿರ್ವಹಣೆ ಮಾಡುತ್ತಿದ್ದೆವು. ಕೆಲ ವರ್ಷಗಳಿಂದ ಮರಳು ತೆಗೆಯುವ ಟೆಂಡರ್ ಬೇರೆಯವರಿಗೆ ನೀಡಲಾಗಿದ್ದು ಪ್ರತಿದಿನ ನಿಗದಿಪಡಿಸಿದ ಪ್ರಮಾಣಕ್ಕೆ 10 ರಿಂದ 20 ಪಟ್ಟು ಹೆಚ್ಚಾಗಿ ಮರಳು ತೆಗೆಯಲಾಗುತ್ತಿದೆ. ಪರಿಣಾಮ ಹೊಳೆಯಲ್ಲಿ ದೈತ್ಯಾಕಾರದ ಗುಂಡಿಗಳು ನಿರ್ಮಾಣವಾಗಿದ್ದು ಭೂಕುಸಿತ ಭೀತಿ ಎದುರಾಗಿದೆ ಇದೆ ಎಂದು ಗ್ರಾಮಸ್ಥರು ದೂರಿದರು.

***

ಉದ್ಯಾವರ ಕುದ್ರುವಿನಲ್ಲಿ ಅದಮಾರು ಮಠ ಹಾಗೂ ಸೋದೆ ಮಠದ ಭೂಮಿ ಇದೆ. ಸೋದೆ ಶ್ರೀಗಳೂ ಅಕ್ರಮ ಮರಳು ಮಾಫಿಯಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
–ಈಶಪ್ರಿಯ ತೀರ್ಥ ಸ್ವಾಮೀಜಿ, ಅದಮಾರು ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.