
ಉಡುಪಿ: ಭಾರತ ಹಣಕಾಸು ಸಚಿವಾಲಯದ ಮಾರ್ಗಸೂಚಿ ಅನ್ವಯ ದೀರ್ಘ ಕಾಲದವರೆಗೆ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಹಾಗೂ ಷೇರುಗಳನ್ನು ಅವರ ವಾರಸುದಾರರಿಗೆ ಕಾನೂನುಬದ್ದವಾಗಿ ಹಸ್ತಾಂತರಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪಂಚಾಯಿತಿ, ಆರ್.ಬಿ.ಐ, ಲೀಡ್ ಬ್ಯಾಂಕ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕುಗಳ ಆಶ್ರಯದಲ್ಲಿ ವಿಶೇಷ ಶಿಬಿರವು ಶುಕ್ರವಾರ ನಗರದ ಜಿಲ್ಲಾ ಪಂಚಾಯಿತಿಯ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಿಶ್ಚಿತ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ₹78 ಕೋಟಿ ಮೌಲ್ಯದ ನಿಷ್ಕ್ರಿಯಗೊಂಡ ಖಾತೆಗಳಿವೆ. ಆ ಖಾತೆಯಲ್ಲಿರುವ ಹಣವನ್ನು ವಾರಸುದಾರರಿಗೆ ತಲುಪಿಸುವ ಉದ್ದೇಶದಿಂದ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಬ್ಯಾಂಕಿಂಗ್, ವಿಮೆ ಮತ್ತು ಇತರ ವಲಯಕ್ಕೆ ಸಂಬಂಧಿಸಿದ ಕಚೇರಿ ಶಾಖೆಗಳಲ್ಲಿ ಡಿಸೆಂಬರ್ 31 ರ ವರೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದ್ದು, ಜನರು ಅದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಠೇವಣಿ ಪಡೆಯುವ ಕುರಿತಾದ ಮಾಹಿತಿಯುಳ್ಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಶಿಬಿರದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್. ಎಸ್ ಕಾದ್ರೊಳ್ಳಿ, ಆರ್.ಬಿ.ಐ ನ ಎಜಿಎಂ ನಿಶಾ ಠಾಕೂರ್, ಕೆನರಾ ಬ್ಯಾಂಕ್‌ನ ಅರ್ಚನಾ, ಲೀಡ್ ಬ್ಯಾಂಕ್ ಮೆನೇಜರ್ (ಪ್ರಭಾರ) ಕೆ. ಎಸ್.ಮಹಾದೇವಪ್ಪ, ಉಡುಪಿ ಜಿ.ಪಂ. ಯೋಜನಾಧಿಕಾರಿ ವಿಜಯ್ ಕುಮಾರ್ ಉಪಸ್ಥಿತರಿದ್ದರು.