ADVERTISEMENT

ಎಂಜಿಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 6:45 IST
Last Updated 23 ಆಗಸ್ಟ್ 2024, 6:45 IST
ಎಂಜಿಎಂ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿತು
ಎಂಜಿಎಂ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿತು   

ಉಡುಪಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದ ಆವಿಷ್ಕಾರದಿಂದ ಭವಿಷ್ಯದಲ್ಲಿ ಶಿಕ್ಷಣ, ಆರೋಗ್ಯ, ವಾಣಿಜ್ಯ, ಹಣಕಾಸು, ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಮಣಿಪಾಲದ ಮಾಹೆಯ ರಿಜಿಸ್ಟ್ರಾರ್‌ ಪಿ. ಗಿರಿಧರ ಕಿಣಿ ಹೇಳಿದರು.

ಎಂಜಿಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್‌ ವಿಭಾಗ, ಐಕ್ಯುಎಸಿ ಸಹಯೋಗದೊಂದಿಗೆ ‘ಕೃತಕ ಬುದ್ಧಿಮತ್ತೆ: ಸಿದ್ಧಾಂತದ ಪರಿಣಾಮದತ್ತ’ ವಿಷಯದ ಕುರಿತು ಹಮ್ಮಿಕೊಂಡ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಹಜ ಬುದ್ಧಿಮತ್ತೆಯಿಂದ ಕೃತಕ ಬುದ್ಧಿಮತ್ತೆಯ (ಎ.ಐ.) ಕಡೆ ತಂತ್ರಜ್ಞಾನವು ರೂಪಾಂತರ ಹೊಂದುತ್ತಿರುವುದಕ್ಕೆ, ಬೆಳವಣಿಗೆ ಹೊಂದುತ್ತಿರುವುದಕ್ಕೆ ಸಾಕ್ಷಿಯಾಗಿರುವ ನಾವೆಲ್ಲಾ ಭಾಗ್ಯವಂತರು. ಇದರಿಂದ ಭವಿಷ್ಯದಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ ಎಂದು ಪ್ರತಿಪಾದಿಸಿದರು.

ADVERTISEMENT

ನಮ್ಮ ದೈನಂದಿನ ಬದುಕಿಗೆ ಸಂಬಂಧಪಟ್ಟಿರುವ ಹಲವು ವಿಚಾರಗಳು ಇಂದು ಎ.ಐ. ತಂತ್ರಜ್ಞಾನಕ್ಕೆ ಪರಿವರ್ತನೆಯಾಗುತ್ತಿವೆ. ಈ ತಂತ್ರಜ್ಞಾನವನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಸಾಕಷ್ಟು ಚಿಂತನೆ ನಡೆಯುತ್ತಿದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿಯೂ ಇದರಿಂದ ಅನುಕೂಲವಾಗಲಿದೆ. ಅನುಕೂಲ ಇರುವಂತೆ ಅಪಾಯವೂ ಇದೆ. ಈಗ ಹೊಸ ಹೊಸ ಎ.ಐ. ಆ್ಯಪ್‌ಗಳು ಬರುತ್ತಿದ್ದು, ಅವುಗಳ ಕುರಿತು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಹೇಳಿದರು.

ಭವಿಷ್ಯದಲ್ಲಿ ಅತ್ಯಂತ ಹೆಚ್ಚು ಅವಕಾಶಗಳಿರುವ ಎ.ಐ. ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್‌ ಸೈನ್ಸ್ ವಿಭಾಗದ ಮುಖ್ಯಸ್ಥ ಮಂಜಯ್ಯ ಡಿ.ಎಚ್. ಮಾತನಾಡಿ, ನಮಗೆ ಸವಾಲಾಗಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎ.ಐ. ತಂತ್ರಜ್ಞಾನವು ಸಹಕಾರಿಯಾಗಲಿದೆ. ದೇಶದ ಜನಸಂಖ್ಯೆಯಲ್ಲಿ ಶೇ 60ರಷ್ಟು ಯುವಜನರು ಇದ್ದಾರೆ. ಯುವಜನರು ಇಂತಹ ಆಧುನಿಕ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದರು.

ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ್‌ ಮಾತನಾಡಿ, ಎ.ಐ. ತಂತ್ರಜ್ಞಾನ ನಮ್ಮ ಬದುಕನ್ನು ಸರಳಗೊಳಿಸಲಿದೆ. ಶಿಕ್ಷಣ ಕ್ಷೇತ್ರದಲ್ಲೂ ಕ್ರಾಂತಿಯುಂಟು ಮಾಡಲಿದೆ ಎಂದು ಆಶಯ ವ್ಯಕ್ತಪಡಿಸಿ, ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ವಿಭಾಗಗಳಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಎ.ಐ. ಪರಿಣತರಾದ ಜಯರಾಮ್ ಬಿ.ಕೆ, ಸಿ.ಎ.ಬಿ.ಪಿ. ವರದರಾಯ ಪೈ, ಮಾಲತಿ ದೇವಿ, ದೇವಿದಾಸ್‌ ನಾಯಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.