ADVERTISEMENT

2047ಕ್ಕೆ ಭಾರತ ವಿಶ್ವದ ನಂಬರ್ ಒನ್‌ ರಾಷ್ಟ್ರ: ಅಣ್ಣಾಮಲೈ

ಯುವ ಸಂವಾದ ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 14:32 IST
Last Updated 28 ಮಾರ್ಚ್ 2023, 14:32 IST
ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗದಿಂದ ಮಂಗಳವಾರ ಪೂರ್ಣ ಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಮಾತನಾಡಿದರು
ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗದಿಂದ ಮಂಗಳವಾರ ಪೂರ್ಣ ಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಮಾತನಾಡಿದರು   

ಉಡುಪಿ: ಮುಂದಿನ 25 ವರ್ಷಗಳ ಅವಧಿ ಭಾರತದ ಪಾಲಿಗೆ ಅಮೃತಕಾಲವಾಗಿರಲಿದ್ದು 2047ರ ಹೊತ್ತಿಗೆ ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿರಲಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗದಿಂದ ಮಂಗಳವಾರ ಪೂರ್ಣ ಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಜಾಗತಿಕ ಆರ್ಥಿಕ ಶಕ್ತಿಕೇಂದ್ರವಾಗಿ ಬೆಳೆಯುತ್ತಿದ್ದು, ಪ್ರಸ್ತುತ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ.

2028ರಲ್ಲಿ ಮೂರನೇ ಸ್ಥಾನಕ್ಕೇರುವ ಗುರಿ ಇದ್ದು, ಲಭ್ಯವಿರುವ 80 ಕೋಟಿ ಯುವ ಶಕ್ತಿಯನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲಾಗುವುದು. ದೇಶದಲ್ಲಿರುವ 1 ಬಿಲಿಯನ್ ಡಾಲರ್ ಮೌಲ್ಯ ಹೊಂದಿರುವ 107 ಯುನಿಕಾರ್ನ್‌ ಕಂಪೆನಿಗಳಿದ್ದು, ಬೆಂಗಳೂರಿನಲ್ಲಿ 39 ಕಂಪೆನಿಗಳಿವೆ. ವಿಶ್ವದ ಫಾರ್ಚೂನ್‌ 500 ಕಂಪೆನಿಗಳಲ್ಲಿ 71 ಕಂಪೆನಿಗಳ ಸಿಇಒ ಭಾರತ ಮೂಲದವರು ಎಂಬುದು ವಿಶೇಷ ಎಂದು ಅಣ್ಣಾಮಲೈ ಹೇಳಿದರು.

ADVERTISEMENT

2014ರ ಮೇನಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ನಕ್ಸಲ್‌ ಸಮಸ್ಯೆ, ಚೀನಾ, ಪಾಕಿಸ್ತಾನದೊಂದಿಗೆ ಗಡಿ ವಿವಾದ, ಈಶಾನ್ಯ ರಾಜ್ಯಗಳ ಸಮಸ್ಯೆ ಗಂಭೀರವಾಗಿತ್ತು. ಕಳೆದ 9 ವರ್ಷಗಳಲ್ಲಿ ದೇಶದ ಚಿತ್ರಣ ಬದಲಾಗಿದೆ. ದಶಕದ ಹಿಂದೆ ಜನರು ಮಾರುಕಟ್ಟೆಗಳಿಗೆ, ಜನನಿಬಿಡ ಸ್ಥಳಗಳಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ಇತ್ತು. ಬಾಂಬ್ ಸ್ಫೋಟಗಳ ಆತಂಕ ಕಾಡುತ್ತಿತ್ತು.

ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇಶದ ಆಂತರಿಕ ಸುರಕ್ಷತೆ ಹಾಗೂ ಭದ್ರತೆಗೆ ಒತ್ತು ನೀಡಿದ ಪರಿಣಾಮ ಬಾಂಬ್ ಸ್ಫೋಟಗಳು ನಿಂತಿವೆ. ಈಶಾನ್ಯ ರಾಜ್ಯಗಳು ಸೇರಿದಂತೆ ಕಾಶ್ಮೀರಕ್ಕೆ ಹೋಗಲು ಅನುಮತಿ ಪತ್ರ ಪಡೆಯುವ ನಿಯಮ ರದ್ದಾಗಿದೆ. ದೇಶದ ಯಾವುದೇ ಮೂಲೆಗೂ ಸುರಕ್ಷಿತ ಹಾಗೂ ನಿರಾತಂಕವಾಗಿ ಪ್ರವಾಸ ಮಾಡಬಹುದು. ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದು ಮಾಡಿದ ಬಳಿಕ ಕಾಶ್ಮೀರಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಪ್ರತಿವರ್ಷ 1 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎಂದರು.

ಛತ್ತೀಸ್‌ಘಡ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್‌ನಲ್ಲಿ ನಕ್ಸಲ್ ಚಟುವಟಿಕೆಗಳು ನಿಂತಿವೆ. 8,000ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. 11 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಾಣವಾಗಿದೆ. ಶೇ 99.98 ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್‌ ಸಿಕ್ಕಿದೆ. 46 ಕೋಟಿ ಮಹಿಳೆಯರಿಗೆ ಜನಧನ್‌ ಖಾತೆಯ ಸೌಲಭ್ಯ ದೊರೆತಿದೆ ಎಂದು ಅಣ್ಣಾಮಲೈ ಹೇಳಿದರು.

ನೆರೆಯ ಪಾಕಿಸ್ತಾನ ಸ್ವಾತಂತ್ರ್ಯ ಬಳಿಕ 20 ಪ್ರಧಾನಿಗಳನ್ನು ಕಂಡಿದ್ದು ಒಬ್ಬರೂ ಪೂರ್ಣಾವಧಿ ಅಧಿಕಾರ ಅನುಭವಿಸಿಲ್ಲ. ಆದರೆ, ಭಾರತ 14 ಪ್ರಧಾನಿಗಳನ್ನು ಕಂಡಿದ್ದು 8 ಮಂದಿ ಪೂರ್ಣಾವಧಿ ಅಧಿಕಾರ ಪೂರೈಸಿದ್ದಾರೆ. ದೇಶದ ಸಮರ್ಥ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಸಾಕ್ಷಿ.

ಪ್ರಸ್ತುತ ದೇಶದ ಆರ್ಥಿಕತೆ 3.1 ಟ್ರಿಲಿಯನ್‌ಗೆ ಏರಿಕೆಯಾಗಿದ್ದರೆ ಪಾಕಿಸ್ತಾನದ್ದು ಕೇವಲ 346 ಬಿಲಿಯನ್‌ ಇದೆ. ಆರ್‌ಬಿಐನಲ್ಲಿ 570 ಬಿಲಿಯನ್‌ ಡಾಲರ್ ವಿದೇಶಿ ವಿನಿಯಮ ಲಭ್ಯವಿದ್ದರೆ, ಪಾಕಿಸ್ತಾನದಲ್ಲಿ 7.8 ಬಿಲಿಯನ್ ಡಾಲರ್ ಮಾತ್ರ ಇದೆ. ಜನರ ಜೀವನ ಮಟ್ಟ, ಆರ್ಥಿಕ ಮಟ್ಟ, ಸಾಕ್ಷರತಾ ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ ಎಂದು ಅಂಕಿ ಅಂಶಗಳನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.