ADVERTISEMENT

ಉಡುಪಿ | ಕುಕ್ಕೇಹಳ್ಳಿ ರೈತನ ಕೈ ಹಿಡಿದ ಮೀನು ಕೃಷಿ

ಒಳನಾಡು ಮೀನು ಕೃಷಿಯಲ್ಲಿ ಯಶಸ್ಸು: ಬೇಡಿಕೆ ಕುದುರುತ್ತಿದೆ ತಿಲಾಪಿಯ, ರೂಪ್‌ಚಂದ್‌ಗೆ

ನವೀನ್ ಕುಮಾರ್ ಜಿ.
Published 4 ಜುಲೈ 2025, 7:31 IST
Last Updated 4 ಜುಲೈ 2025, 7:31 IST
ಮಹೇಶ್‌ ಹೆಬ್ಬಾರ್‌ ಅವರ ಕೊಳದಲ್ಲಿ ಹಿಡಿದ ಮೀನು
ಮಹೇಶ್‌ ಹೆಬ್ಬಾರ್‌ ಅವರ ಕೊಳದಲ್ಲಿ ಹಿಡಿದ ಮೀನು   

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಒಳನಾಡು ಮೀನು ಕೃಷಿಗೆ ಹೆಚ್ಚಿನ ರೈತರು ಆಸಕ್ತಿ ತೋರದಿದ್ದರೂ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿಯ ಕೆ.ಮಹೇಶ್ ಹೆಬ್ಬಾರ್ ಅವರು ಈ ಮೀನು ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

ತಮ್ಮ ಮೂರು ಎಕರೆ ಜಾಗದಲ್ಲಿರುವ ನಾಲ್ಕು ಕೆರೆಗಳಲ್ಲಿ ಕಳೆದ 12 ವರ್ಷಗಳಿಂದ ಒಳನಾಡು ಮೀನುಗಳಾದ ತಿಲಾಪಿಯ, ರೂಪ್‌ಚಂದ್, ರೋಹು, ಕಾಟ್ಲಾ ಸಾಕಣೆ ಮಾಡಿ ಲಾಭ ಪಡೆದಿದ್ದಾರೆ.

ಜೂನ್ ತಿಂಗಳಲ್ಲಿ ಮರಿ ಬಿತ್ತನೆ ಮಾಡುವ ಅವರು ಒಂದು ವರ್ಷದ ಬಳಿಕ ಮೀನುಗಳನ್ನು ಮಾರಾಟ ಮಾಡುತ್ತಾರೆ. ಈ ಬಾರಿಯೂ ತಿಲಾಪಿಯ ಮತ್ತು ರೂಪ್‌ಚಂದ್‌ ಮೀನುಗಳನ್ನು ಹಿಡಿದು, ಪ್ರತಿ ಭಾನುವಾರ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಸಮುದ್ರದಲ್ಲಿ ಮೀನುಗಾರಿಕೆ ನಡೆಸುವವರಿಗೆ ಮೀನುಗಳು ಸಿಗದೇ ಮತ್ಸ್ಯಕ್ಷಾಮ ಎದುರಿಸುತ್ತಿರುವ ಇಂದಿನ ದಿನಮಾನದಲ್ಲಿ ಕರಾವಳಿಯಲ್ಲಿ ಒಳನಾಡು ಮೀನುಗಳಿಗೆ ಬೇಡಿಕೆ ಕುದುರುತ್ತಿದೆ. ಆದರೆ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಒಳನಾಡು ಮೀನು ಕೃಷಿಕರಿದ್ದಾರೆ.

‘ನೈಸರ್ಗಿಕವಾಗಿರುವ ನಾಲ್ಕು ಕೆರೆಗಳಲ್ಲಿ ಮೀನುಗಳನ್ನು ಸಾಕುತ್ತಿದ್ದೇನೆ. ದಿನಕ್ಕೆರಡು ಬಾರಿ ಅವುಗಳಿಗೆ ಆಹಾರ ಹಾಕಬೇಕಾಗುತ್ತದೆ. ಸಿದ್ಧ ಆಹಾರವನ್ನೇ ನೀಡುತ್ತಿದ್ದು, ನೈಸರ್ಗಿಕ ಕೆರೆಯಾದ ಕಾರಣ ನೀರಿನಲ್ಲಿ ಆಮ್ಲಜನಕದ ಕೊರತೆ ಇರುವುದಿಲ್ಲ. ಅದರಿಂದ ಮೀನುಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅವುಗಳಿಗೆ ಹಾಕುವ ಸಿದ್ಧ ಆಹಾರವನ್ನು ಆಂಧ್ರಪ್ರದೇಶದಿಂದ ತರಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಮಹೇಶ್ ಹೆಬ್ಬಾರ್.

‘ಗ್ರಾಹಕರೇ ಮನೆ ಬಾಗಿಲಿಗೆ ಬಂದು ಮೀನು ಖರೀದಿಸುವುದರಿಂದ ಸಾಕಣೆ ಮಾಡುವ ಮೀನುಗಳಿಗೆ ಎಂದೂ ಮಾರುಕಟ್ಟೆ ಸಮಸ್ಯೆ ತಲೆದೋರಿಲ್ಲ’ ಎನ್ನುತ್ತಾರೆ ಅವರು.

ಹೆಬ್ಬಾರ್‌ ಅವರು ತಿಲಾಪಿಯ ಮತ್ತು ರೂಪ್‌ಚಂದ್‌ ಮೀನಿನ ಮರಿಗಳನ್ನು ಪಶ್ಚಿಮ ಬಂಗಾಳದಿಂದ ತರಿಸಿಕೊಳ್ಳುತ್ತಾರೆ. ಈ ಮೀನು ಮರಿಗಳು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರುತ್ತವೆ. ಅಲ್ಲಿಂದ ಅವರೇ ತೆಗೆದುಕೊಂಡು ಬರುತ್ತಾರೆ. ಈ ಜಾತಿಯ ಒಂದು ಮೀನಿನ ಮರಿಗೆ ₹2 ರಿಂದ ₹4 ಬೆಲೆ ಇದೆ. ರೋಹು ಮತ್ತು ಕಟ್ಲಾ ಮೀನು ಮರಿಗಳನ್ನು ಭದ್ರಾವತಿಯಿಂದ ತರಿಸಿಕೊಳ್ಳುತ್ತಾರೆ. ಈ ಮೀನುಗಳ ಬೆಲೆ ಒಂದು ಮರಿಗೆ ₹ 45 ಪೈಸೆಯಿಂದ ಆರಂಭವಾಗುತ್ತದೆ.

‘ಎರಡು ಕೊಳಗಳಲ್ಲಿ ರೋಹು ಮತ್ತು ಕಾಟ್ಲಾ ಮೀನುಗಳು ಕೊಯ್ಲಿಗೆ ಸಿದ್ಧವಾಗಿವೆ. ಈಗ ಮಳೆ ಬರುತ್ತಿರುವುದರಿಂದ ಕೊಳದಲ್ಲಿ ನೀರಿನ ಪ್ರಮಾಣ ಅಧಿಕವಿದೆ. ಬಿಸಿಲಿನ ವಾತಾವರಣ ಬಂದ ನಂತರ ಅವುಗಳನ್ನೂ ಮಾರಾಟ ಮಾಡಲಾಗುವುದು. ಸದ್ಯ ತಿಲಾಪಿಯ ಮತ್ತು ರೂಪ್‌ಚಂದ್‌ ಮೀನುಗಳನ್ನು ಮಾರಾಟ ಮಾಡುತ್ತಿದ್ದೇನೆ, ತಿಲಾಪಿಯ ಮೀನನ್ನು ಕೆ.ಜಿ.ಗೆ ₹ 200ಕ್ಕೆ ಹಾಗೂ ರೂಪ್‌ಚಂದ್ ಮೀನನ್ನು ಕೆ.ಜಿ.ಗೆ ₹250ಕ್ಕೆ ಮಾರಾಟ ಮಾಡುತ್ತಿದ್ದೇನೆ ’ ಎಂದು ಮಹೇಶ್‌ ಹೆಬ್ಬಾರ್‌ ತಿಳಿಸಿದರು.

‘ಗ್ರಾಹಕರ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ ಮೀನು ಮಾರಾಟದ ಕುರಿತು ಅದರಲ್ಲಿ ಮಾಹಿತಿ ನೀಡುತ್ತೇನೆ. ಅವರೇ ಬಂದು ಖರೀದಿಸುತ್ತಾರೆ. 30 ಕಿ.ಮೀ. ದೂರದಿಂದ ಬಂದು ಮೀನು ಖರೀದಿಸುವ ಗ್ರಾಹಕರೂ ಇದ್ದಾರೆ’ ಎನ್ನುತ್ತಾರೆ ಅವರು.

ಮಹೇಶ್‌ ಹೆಬ್ಬಾರ್ 
ರೂಪ್‌ಚಂದ್‌ ಮೀನು

ಜೀವಂತ ಮೀನು ಖರೀದಿಗೆ ಬರುವ ಗ್ರಾಹಕರು ಉಪಕೃಷಿಯಾಗಿ ಮೀನು ಸಾಕಣೆ ಲಾಭದಾಯಕ ಹೊರಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಮರಿಗಳು

ವ್ಯವಸ್ಥಿತವಾಗಿ ಮೀನು ಕೃಷಿ ಮಾಡಿದರೆ ಕರಾವಳಿಯಲ್ಲೂ ಒಳನಾಡು ಮತ್ಸಗಳನ್ನು ಸಾಕಣೆ ಮಾಡಿ ಅಧಿಕ ಲಾಭ ಪಡೆಯಬಹುದು
ಕೆ. ಮಹೇಶ್‌ ಹೆಬ್ಬಾರ್‌ ಒಳನಾಡು ಮೀನು ಕೃಷಿಕ

ನೈಸರ್ಗಿಕ ಕೊಳ ಹೆಚ್ಚು ಸೂಕ್ತ’ ಕರಾವಳಿಯಲ್ಲಿ ಸಾಕಷ್ಟು ಜಲಮೂಲಗಳಿರುವುದರಿಂದ ರೈತರು ನೈಸರ್ಗಿಕ ಕೊಳಗಳಲ್ಲೂ ಮೀನು ಸಾಕಣೆ ಮಾಡಿ ಲಾಭ ಪಡೆಯಬಹುದು. ನಾನು ಮೀನು ಸಾಕಣೆ ಮಾಡುವ ಕೊಳಗಳಲ್ಲಿ 10 ಅಡಿಯಷ್ಟು ನೀರು ಇರುತ್ತದೆ. ಅದರಿಂದ ಮೀನುಗಳ ಬೆಳವಣಿಗೆ ಸಮರ್ಪಕವಾಗಿರುತ್ತದೆ. ಅಡಿಕೆ ಕೃಷಿಯನ್ನೂ ಮಾಡುತ್ತಿರುವುದರಿಂದ ಅಡಿಕೆ ತೋಟಕ್ಕೆ ಇದೇ ಕೊಳಗಳ ನೀರನ್ನು ಬಳಸುತ್ತೇನೆ ಎನ್ನುತ್ತಾರೆ ಮಹೇಶ್‌ ಹೆಬ್ಬಾರ್‌. ತಿಲಾಪಿಯ ರೂಪ್‌ಚಂದ್‌ ರೋಹು ಕಾಟ್ಲಾ ತಳಿಯ ಮೀನುಗಳು ಬೆಳವಣಿಗೆ ಹೊಂದಿ ಮಾರಾಟಕ್ಕೆ ಬರಲು ಒಂದು ವರ್ಷ ಬೇಕು. ಒಂದು ವರ್ಷದಲ್ಲಿ ಒಂದು ಮೀನು 1 ಕೆ.ಜಿ.ಯಷ್ಟು ತೂಗುತ್ತದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.