ADVERTISEMENT

ಪ್ರತಿಭಟನೆ ಬ್ಯಾನರ್‌ನಲ್ಲಿ ಕ್ರೈಸ್ತರ ಶಿಲುಬೆಗೆ ಅವಮಾನ

ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಖಂಡನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 12:51 IST
Last Updated 24 ಸೆಪ್ಟೆಂಬರ್ 2019, 12:51 IST
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಮಾತನಾಡಿದರು.ಪ್ರಜಾವಾಣಿ ಚಿತ್ರ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಕ್ರೈಸ್ತರ ಮೇಲೆ ಮತಾಂತರದ ಸುಳ್ಳು ಆರೋಪ ಹೊರಿಸಿ ಸೆ. 26ರಂದು ಹಿಂದೂ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಬ್ಯಾನರ್‌ನಲ್ಲಿ ಕ್ರೈಸ್ತರ ಶಿಲುಬೆಯನ್ನು ನಿಷೇಧಿಸುವ ಚಿಹ್ನೆ ಹಾಕಿ ಅವಮಾನಿಸಿರುವುದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವು ತಂದಿದೆ ಎಂದು ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕ್ರೈಸ್ತ ಸಮುದಾಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಅದಕ್ಕೆ ಬೆಂಬಲವನ್ನು ಕೊಟ್ಟಿಲ್ಲ. ಅಲ್ಲದೆ, ಹಿಂದೂ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಗೂ ನಮ್ಮ ವಿರೋಧವಿಲ್ಲ. ಆದರೆ ಪ್ರತಿಭಟನೆಯ ಬ್ಯಾನರ್‌ನಲ್ಲಿ ಕ್ರೈಸ್ತರ ಶಿಲುಬೆಯನ್ನು ನಿಷೇಧಿಸುವ ಚಿಹ್ನೆ ಹಾಕಿ ಅವಮಾನಿಸಿರುವುದು ಸರಿಯಲ್ಲ. ಶಿಲುಬೆ ಕ್ರೈಸ್ತರ ಧಾರ್ಮಿಕ ಸಂಕೇತವಾಗಿದ್ದು, ಅದರ ಬಗ್ಗೆ ಅಪಾರ ಗೌರವವಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪ ಡಿವೈನ್‌ ರೆಟ್ರಿಟ್‌ ಸೆಂಟರ್‌ನಲ್ಲಿ ಹಿಂದೂ ಯುವಕನನ್ನು ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಸೆಂಟರ್‌ನಲ್ಲಿ ಏನಾಗಿದೆ ಎನ್ನುವ ಮಾಹಿತಿ ಯಾರಿಗೂ ಗೊತ್ತಿಲ್ಲ. ಸುಳ್ಳು ಅಪಪ್ರಚಾರಕ್ಕೆ ಇಡೀ ಕ್ರೈಸ್ತ ಧರ್ಮವನ್ನು ಮತ್ತು ಧರ್ಮದ ಸಂಕೇತಗಳಿಗೆ ಅವಮಾನಿಸುವುದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಸುಳ್ಳು ಆರೋಪ ಹೊರಿಸುವ ಬದಲು ಸೌಹಾರ್ದಯುತ ಪರಿಹಾರ ಕಾಣಲು ಸಾಧ್ಯವಿದೆ. ಬಲವಂತದ ಮತಾಂತರ ಪ್ರಕ್ರಿಯೆ ನಡೆದರೆ ಕಾನೂನಿನ ಮೂಲಕ ಪರಿಹಾರಕ್ಕೆ ಪ್ರಯತ್ನಿಸಬಹುದು. ಅದಕ್ಕೆ ಕ್ರೈಸ್ತ ಸಮುದಾಯ ಬೆಂಬಲವೂ ಇದೆ. ನಮ್ಮ ಸಮುದಾಯದ ವಿರುದ್ಧ ನಡೆಯುತ್ತಿರುವ ಹುನ್ನಾರದಿಂದ ಕ್ರೈಸ್ತ ಸಂಸ್ಥೆಗಳು ಭೀತಿಯ ವಾತಾವರಣವನ್ನು ಅನುಭವಿಸುತ್ತಿದ್ದು, ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ್‌ನ ನಿಕಟಪೂರ್ವ ಅಧ್ಯಕ್ಷ ವೆಲೇರಿಯನ್‌ ಫರ್ನಾಂಡಿಸ್‌, ನಿಯೋಜಿತ ಅಧ್ಯಕ್ಷ ರೋಬರ್ಟ್‌ ಮಿನೇಜಸ್‌, ಮಾಜಿ ಅಧ್ಯಕ್ಷ ಕಿರಣ್‌ ಎಲ್‌ರಾಯ್‌ ಕ್ರಾಸ್ಟಾ, ನಿಕಟಪೂರ್ವ ಅಧ್ಯಕ್ಷೆ ಮೇರಿ ಡಿಸೋಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.