ADVERTISEMENT

ಉಡುಪಿ: ತರಹೇವಾರಿ ಹಲಸಿಗೆ ಮನಸೋತ ಹಲಸು ಪ್ರಿಯರು

ಮೂರು ದಿನ ನಡೆದ ಮೇಳಕ್ಕೆ ತೆರೆ; ಹಲಸಿನ ಖಾದ್ಯಗಳಿಗೆ ಉತ್ತಮ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:45 IST
Last Updated 15 ಜುಲೈ 2019, 19:45 IST
ಹಲಸು ಖರೀದಿಯಲ್ಲಿ ತೊಡಗಿರುವ ಗ್ರಾಹಕರುಪ್ರಜಾವಾಣಿ ಚಿತ್ರ
ಹಲಸು ಖರೀದಿಯಲ್ಲಿ ತೊಡಗಿರುವ ಗ್ರಾಹಕರುಪ್ರಜಾವಾಣಿ ಚಿತ್ರ   

ಉಡುಪಿ: ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಜಿಲ್ಲಾಮಟ್ಟದ ಹಲಸು ಮೇಳ ಹಾಗೂ ಸಸ್ಯ ಸಂತೆ ಸೋಮವಾರ ಮುಕ್ತಾಯವಾಯಿತು.

ಮೂರು ದಿನಗಳ ಹಲಸಿನ ಮೇಳಕ್ಕೆ ಹಲಸಿನ ಪ್ರಿಯರಿಂದ ಉತ್ತಮ ಸ್ಪಂದನ ವ್ಯಕ್ತವಾಯಿತು. ಭಾಗವಹಿಸಿದ್ದ 25 ಮಳಿಗೆಗಳು ಉತ್ತಮ ವ್ಯಾಪಾರದೊಂದಿಗೆ ಮೇಳಕ್ಕೆ ವಿದಾಯ ಹೇಳಿದರು.

ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ಸತ್ಯಸಂತೆಯಲ್ಲಿ ಸುಮಾರು 60,000 ಬೆಲೆಯ ಗಿಡಗಳು ಮಾರಾಟವಾದವರು. ಉತ್ತಮ ಗುಣಮಟ್ಟ ಹಾಗೂ ತಳಿಯ ಕಾರಣಕ್ಕೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಖರೀದಿಸಿದರು.

ADVERTISEMENT

500ಕ್ಕೂ ಹೆಚ್ಚು ಅಡಿಕೆ ಗಿಡ, 2000ಕ್ಕೂ ಹೆಚ್ಚು ಗೇರು, 500 ಇತರ ಅಲಂಕಾರಿಕ ಗಿಡಗಳು, 100 ಕೊಕೋ, 1000 ಕಾಳುಮೆಣಸಿನ ಬಳ್ಳಿ, 400 ಕಸಿ ಕಾಳುಮೆಣಸಿನ ಬಳ್ಳಿಗಳು ಹಾಗೂ 4000 ತರಕಾರಿ ಗಿಡಗಳು ಮಾರಾಟವಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹಲಸಿನ ಹೋಳಿಗೆ ಭರ್ಜರಿ ಮಾರಾಟ:ಮಂಗಳೂರಿನ ಶೋಭಿತ್ ಹಲಸಿನ ಹೋಳಿಗೆಯ ರುಚಿಗೆ ಮೇಳಕ್ಕೆ ಬಂದವರು ಮನಸೋತರು. ತುಪ್ಪದಲ್ಲಿ ಬೇಯಿಸಿದ್ದಘಮಘಮಿಸುತ್ತಿದ್ದ ಹೋಳಿಗೆಯನ್ನು ಖರೀದಿಸಲು ಜನರು ಮುಗಿಬಿದ್ದರು. ಮೂರು ದಿನಗಳು ನಿರೀಕ್ಷೆಗೂ ಮೀರಿ ವ್ಯಾಪಾರ ನಡೆಯಿತು. ₹ 50,000 ಬೆಲೆಯ ಹೋಳಿಗೆಗಳು ಖರ್ಚಾಗಿವೆ ಎಂದು ಮಾಲಕಿ ಲಕ್ಷ್ಮೀ ಆಚಾರ್ಯ ಸಂತಸ ವ್ಯಕ್ತಪಡಿಸಿದರು.

ಮಳೆಯ ಮಧ್ಯೆಯೂಕೈಲಾರ್ಸ್‌ ಸಂಸ್ಥೆಯ ನ್ಯಾಚುರಲ್ ಐಸ್‌ಕ್ರೀಂ ವ್ಯಾಪಾರ ಜೋರಾಗಿತ್ತು. ಹಲಸಿನ ಐಸ್‌ಕ್ರೀಂ, ಬೊಂಡದ ಐಸ್‌ಕ್ರೀಂ, ಗಾಂಧಾರಿ ಮೆಣಸಿನ ಐಸ್‌ಕ್ರೀಂ ವಿಶೇಷವಾಗಿತ್ತು.

ಹಲಸು ಬೆಳೆಗಾರರಿಂದ ಉತ್ತಮ ತಳಿಯ ಹಾಗೂ ರುಚಿಯ ಹಣ್ಣುಗಳನ್ನು ಖರೀದಿಸಿ ಮಾರಾಟಕ್ಕೆ ತಂದಿದ್ದ ಸಾಣೂರು ಹಲಸು ಬೆಳೆಗಾರರ ಸಂಘ, ಮೂರು ಟನ್‌ಗೂ ಅಧಿಕ ಹಲಸನ್ನು ಮಾರಾಟ ಮಾಡಿತು. ಇದರ ಜತೆಗೆ, ಹೆಬ್ಬಲಸು, ಹಲಸಿನ ಕೊಟ್ಟೆ, ಪತ್ರೊಡೆ, ಮುಳಕ ವ್ಯಾಪಾರವೂ ಜೋರಾಗಿತ್ತು.

ಮರಿಕೇಸ್‌ ಸಂಸ್ಥೆಯ ನ್ಯಾಚುರಲ್ಸ್‌ ಐಸ್‌ಕ್ರೀಂ, ಹಲಸಿನ ಬೀಜದ ಹೋಳಿಗೆಗೂ ಬೇಡಿಕೆ ಇತ್ತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಹಲಸಿನ ಹಪ್ಪಳ, ಮಾಂಬಳ, ಚಿಪ್ಸ್‌, ಉಪ್ಪಿನಕಾಯಿ, ತರಹೇವಾರಿ ಹಲಸಿನ ಪದಾರ್ಥಗಳನ್ನು ಗ್ರಾಹಕರು ಹೆಚ್ಚಾರಿ ಖರೀದಿಸಿದರು.

ಗಿಡಗಳಿಗೂ ಬೇಡಿಕೆ:ಉತ್ತಮ ತಳಿಯ ಹಲಸಿನ ಗಿಡಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಗಮ್‌ಲೆಸ್‌, ರೆಡ್‌, ಚಂದ್ರ ಹಲಸಿನ ಗಿಡಗಳು ಹೆಚ್ಚು ಮಾರಾಟವಾದವು.

ಚಂದ್ರ, ರುದ್ರಾಕ್ಷಿ ಹಲಸಿಗೆ ಡಿಮ್ಯಾಂಡ್‌
ದೊಡ್ಡಬಳ್ಳಾಪುರದ ತೂಬಗೆರೆಯ ರೈತ ರವಿಕುಮಾರ್ ತಂದಿದ್ದ ಚಂದ್ರ ಹಲಸು, ರುದ್ರಾಕ್ಷಿ ಹಲಸು, ಏಕಾದಶಿ ಹಲಸಿಗೆ ಡಿಮ್ಯಾಂಡ್ ಹೆಚ್ಚಿತ್ತು.

ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತಿದ್ದ ತೊಳೆಗಳನ್ನು ನೋಡಿಯೇ ಗ್ರಾಹಕರು ಖರೀದಿಗೆ ಆಸಕ್ತಿ ತೋರಿದರು. ಸ್ಥಳೀಯ ತಳಿಗಳಿಗಿಂತ ರುಚಿಯೂ ಭಿನ್ನವಾಗಿದ್ದರಿಂದ ಮಾರಾಟ ಹೆಚ್ಚಾಗಿತ್ತು. ಸುಮಾರು ಒಂದೂವರೆ ಟನ್‌ ಹಲಸು ಭಾನುವಾರ ಸಂಜೆಯಷ್ಟರಲ್ಲಿ ಖಾಲಿಯಾಗಿತ್ತು. ಹಾಗಾಗಿ, ಮೇಳ ಮುಗಿಯುವ ಮುನ್ನವೇ ಮಾಲೀಕರು ವ್ಯಾಪಾರ ಮುಗಿಸಿ ಊರಿಗೆ ತೆರಳಿದರು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.