ADVERTISEMENT

ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಸ್ಪಂತಿಕೆ ಉಳಿಸಿಕೊಳ್ಳಬೇಕು: ಅಪ್ಪಣ್ಣ ಹೆಗ್ಡೆ

ಮರವಂತೆಯಲ್ಲಿ ಜಲ ಜಾನಪದೋತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 14:17 IST
Last Updated 5 ಏಪ್ರಿಲ್ 2022, 14:17 IST
ಮರವಂತೆ ಕಡಲ ಕಿನಾರೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಜಲ ಜಾನಪದೋತ್ಸವನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಗೋವಿಂದ ಬಾಬು ಪೂಜಾರಿ,  ಡಾ.ಎಸ್. ಬಾಲಾಜಿ, ಪ್ರೊ.ಕನರಾಡಿ ವಾದಿರಾಜ ಭಟ್, ಡಾ.ಭಾರತಿ ಮರವಂತೆ ಇದ್ದರು.
ಮರವಂತೆ ಕಡಲ ಕಿನಾರೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಜಲ ಜಾನಪದೋತ್ಸವನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಗೋವಿಂದ ಬಾಬು ಪೂಜಾರಿ,  ಡಾ.ಎಸ್. ಬಾಲಾಜಿ, ಪ್ರೊ.ಕನರಾಡಿ ವಾದಿರಾಜ ಭಟ್, ಡಾ.ಭಾರತಿ ಮರವಂತೆ ಇದ್ದರು.   

ಕುಂದಾಪುರ: ಬದಲಾವಣೆಯ ಕಾಲಘಟ್ಟದಲ್ಲಿ ಇರುವ ನಾವು, ನಮ್ಮ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯಬಾರದು. ನಮ್ಮಲ್ಲಿನ ಸ್ವಂತಿಕೆ ಮಸುಕಾಗದಂತೆ ಕಾಪಾಡಿಕೊಳ್ಳಬೇಕಾದ ಹೊಣೆ ಇದೆ. ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಗಳು ವಿಶಿಷ್ಟವಾಗಿ ಬೆಳೆದು ಬರಬೇಕು ಎಂದು ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಮರವಂತೆಯ ವರಾಹ ಮಹಾರಾಜ ಸ್ವಾಮಿ ಹಾಗೂ ಗಂಗಾಧರೇಶ್ವರ ದೇವಸ್ಥಾನದ ಸಮೀಪದ ಕಡಲ ಕಿನಾರೆಯಲ್ಲಿ ಭಾನುವಾರ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಯುವ ಬ್ರಿಗೇಡ್ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಹಾಗೂ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರ ಆಯೋಜಿಸಿದ್ದ ರಾಜ್ಯ ಮಟ್ಟದ ಜಲ ಜಾನಪದೋತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ರಾಯಭಾರಿಗಳಂತೆ ಇರುವ ಜನಪದೀಯ ಕಲೆಗಳು ಅಳಿದು ಹೋಗುತ್ತಿವೆ. ಇದನ್ನು ಉಳಿಸಿ-ಬೆಳೆಸುವ ಜೊತೆಯಲ್ಲಿ ನಮ್ಮ ಭವಿಷ್ಯದ ಪೀಳಿಗೆಗೆ ಇದರ ಮಹತ್ವ ಹಾಗೂ ಅಗತ್ಯತೆಯನ್ನು ತಿಳಿಸುವ ಜವಾಬ್ದಾರಿ ಸಮಾಜದ ಹಿರಿಯರ ಮೇಲಿದೆ. ನದಿ, ಕಡಲು, ಬೆಟ್ಟಗಳಲ್ಲಿ ಸಿಗುವಷ್ಟು ಶಾಂತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಶಿವರಾಮ ಕಾರಂತರ ಹೇಳಿರುವ ಮಾತುಗಳಿಗೆ ಅನ್ವರ್ಥಕದಂತೆ ಇರುವ ಪ್ರಕೃತಿ ಸೊಬಗಿನ ಮರವಂತೆಯಲ್ಲಿ ಈ ಉತ್ಸವ ನಡೆಯುತ್ತಿದೆ ಎಂದರು.

ADVERTISEMENT

ಪಾರಂಪರಿಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ವರಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಇಂತಹ ಅರ್ಥಪೂರ್ಣ ಉತ್ಸವಗಳನ್ನು ಸಂಘಟಿಸುವುದರಿಂದ ಅಳಿವಿನಂಚಿಗೆ ಸರಿಯುತ್ತಿರುವ ಕಲೆ, ಸಂಸ್ಕೃತಿ, ಆಚರಣೆಗಳನ್ನು ನೆನಪಿಸಿಕೊಂಡು, ಅವುಗಳನ್ನು ಉಳಿಸಿ-ಬೆಳೆಸುವ ಕಾರ್ಯಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ನಮ್ಮ ಸಮಾಜದ ಆಸ್ತಿಗಳಾದ ಕಲೆ, ಸಂಸ್ಕೃತಿ, ದೈವ, ದೇವರು, ಆಚರಣೆಗಳ ಬಗ್ಗೆ ಕಲಿಸಿ ಕೊಡುವ ಕಾರ್ಯಗಳು ನಡೆಯಬೇಕು ಎಂದರು.

ಕನ್ನಡ ಜಾನಪದ ಪರಿಷತ್ ಯುವ ಬ್ರಿಗೇಡ್ ಅಧ್ಯಕ್ಷ ಡಾ.ಎಸ್. ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಬೈಂದೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಭಾರತಿ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಶೀಲ ಶೆಟ್ಟಿ, ಪರಿಷತ್ ಖಜಾಂಚಿ ಡಾ. ಕನಕತಾರ, ಪ್ರೊ.ಕೆ.ಎಸ್.ಕೌಜಲಗಿ, ಡಾ. ರಮೇಶ್ ತೇಲಿ, ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ನಿಕೇತನಾ, ಉತ್ಸವದ ಗೌರವ ಸಲಹೆಗಾರ ಪ್ರೊ.ಕನರಾಡಿ ವಾದಿರಾಜ ಭಟ್, ಮಂಗಳೂರು ವೃತ್ತ ನಿರೀಕ್ಷಕ ಜ್ಯೋತಿರ್ಲಿಂಗ್ ಹೊನಕಟ್ಟಿ, ದಯಾನಂದ ಬಳೆಗಾರ್ ಮರವಂತೆ, ಮರವಂತೆ ಮೀನುಗಾರರ ಸಮಾಜದ ಅಧ್ಯಕ್ಷ ವಾಸುದೇವ ಖಾರ್ವಿ ಇದ್ದರು.

ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಧ್ವಜಾರೋಹಣ ನೆರವೇರಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಸೌಪರ್ಣಿಕಾ ನದಿ ಮತ್ತು ಸಮುದ್ರ ರಾಜನಿಗೆ ಬಾಗಿನ ಅರ್ಪಿಸಲಾಯಿತು. ಸಾಂಪ್ರದಾಯಿಕ ಡೊಳ್ಳು ಹಾಗೂ ಚಂಡೆ ವಾದನಗಳು ಉತ್ಸವದ ಆಕರ್ಷಣೆಯನ್ನು ಹೆಚ್ಚಿಸಿದವು.

ಎಸ್.ಜನಾರ್ದನ ಮರವಂತೆ ಸ್ವಾಗತಿಸಿದರು. ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗ ಸಂಚಾಲಕಿ ಡಾ.ಭಾರತಿ ಮರವಂತೆ ಮಾತನಾಡಿದರು. ಶಿಕ್ಷಕ ಗಣಪತಿ ಹೋಬಳಿದಾರ್ ನಿರೂಪಿಸಿದರು. ಸಂಚಾಲಕ ಉದಯ್ ಕುಮಾರ್ ಬಿ. ಹಾಯ್ಕಾಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.