ADVERTISEMENT

ಮಳೆ ನೀರು ಸಂಗ್ರಹದಿಂದ ಸಮಸ್ಯೆಗೆ ಮುಕ್ತಿ

ಜಲಾಮೃತ ವರ್ಷ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧೂ ಬಿ.ರೂಪೇಶ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 16:30 IST
Last Updated 3 ಜುಲೈ 2019, 16:30 IST
ಬುಧವಾರ ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಳವಡಿಸಿರುವ ಮಳೆ ನೀರು ಸಂಗ್ರಹ ಘಟಕ ಹಾಗೂ ಮಳೆ ನೀರು ತಡೆಹಿಡಿಯುವ ಘಟಕವನ್ನು ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧೂ ರೂಪೇಶ್  ಉದ್ಘಾಟಿಸಿದರು.
ಬುಧವಾರ ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಳವಡಿಸಿರುವ ಮಳೆ ನೀರು ಸಂಗ್ರಹ ಘಟಕ ಹಾಗೂ ಮಳೆ ನೀರು ತಡೆಹಿಡಿಯುವ ಘಟಕವನ್ನು ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧೂ ರೂಪೇಶ್  ಉದ್ಘಾಟಿಸಿದರು.   

ಉಡುಪಿ: ಭೂಮಿಗೆ ಬಿದ್ದ ಮಳೆಯ ನೀರನ್ನು ಸಂರಕ್ಷಿಸಿ ಬಳಸಿಕೊಂಡರೆ ಜಲಕ್ಷಾಮ ಎದುರಿಸುವ ಸ್ಥಿತಿ ಬರುವುದಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸಿಂಧೂ ಬಿ.ರೂಪೇಶ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ, ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಜಲಾಮೃತ ವರ್ಷ ಕಾರ್ಯಕ್ರಮದಡಿಯಲ್ಲಿ ಬುಧವಾರ ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಳವಡಿಸಿರುವ ಮಳೆ ನೀರು ಸಂಗ್ರಹ ಘಟಕ ಹಾಗೂ ಮಳೆ ನೀರು ತಡೆಹಿಡಿಯುವ ಘಟಕ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಭಾಗದಲ್ಲಿ ಬೀಳುವ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳದ ಪರಿಣಾಮ ಶೇ 90ರಷ್ಟು ನೀರು
ಸಮುದ್ರದ ಪಾಲಾಗುತ್ತಿದೆ. ಪರಿಣಾಮ ಬೇಸಗೆಯಲ್ಲಿ ಜಲಕ್ಷಾಮ ಎದುರಾಗುತ್ತಿದೆ. ಪ್ರತಿಯೊಬ್ಬರೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಂಡರೆ ನೀರಿನ ಸಮಸ್ಯೆ ಇರುವುದಿಲ್ಲ. ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕಿಲ್ಲ ಎಂದರು.

ADVERTISEMENT

ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿತ್ತು. ಆದರೂ ಈ ಬಾರಿ ಏಪ್ರಿಲ್, ಮೇನಲ್ಲಿ ನೀರಿನ ಅಭಾವ ಎದುರಾಗಿತ್ತು. ಗಂಭೀರ ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗಿದೆ. ಜಲಮೂಲ ಖಾಲಿಯಾದರೆ ಟ್ಯಾಂಕರ್ ನೀರು ಪೂರೈಸಲೂ ಸಾಧ್ಯವಿಲ್ಲ. ಹಾಗಾಗಿ,ಮಳೆ ನೀರನ್ನು ಸಂಗ್ರಹಿಸಿಕೊಳ್ಳಬೇಕಿರುವುದು ನಾಗರಿಕರಜವಾಬ್ದಾರಿ ಎಂದರು.

ಮನೆ, ಅಪಾರ್ಟ್‌ಮೆಂಟ್‌, ಕಚೇರಿಗಳಲ್ಲಿಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳಬೇಕು. ನೀರಿನ ಅಗತ್ಯತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಪನ್ಮೂಲ ವ್ಯಕ್ತಿ ಜೋಸೆಫ್ ಜಿ.ಎಂ.ರೆಬೆಲ್ಲೊಮಾತನಾಡಿ, ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಜನರಿಗೆ ಮಳೆಗಾಲದ ಅನುಭವವಾಗುತ್ತಿಲ್ಲ. ಬಿಸಿಲಿನ ವಾತಾವರಣ ಹೆಚ್ಚುತ್ತಿದ್ದು ಅಂತರ್ಜಲ ಮಟ್ಟ ಕುಸಿದಿದೆ.ಅರಣ್ಯ ಸಂಪತ್ತು ನಾಶವಾಗುತ್ತಿದೆ. ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಯುವಸಮುದಾಯ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಕಾರಿ ಎ.ಶ್ರೀನಿವಾಸ್ ರಾವ್ ಜಲಜಾಗೃತಿ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ಸಂಚಾಲಕರಾದ ಲಾರೆನ್ಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಯ ಲ್ಯಾನ್ಸಿ ಫೆರ್ನಾಂಡಿಸ್ ಸ್ವಾಗತಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೀರಾ ಡಿಸಿಲ್ವ ಉಪಸ್ಥಿತರಿದ್ದರು. ಸಹಶಿಕ್ಷಕ ಪ್ರಶಾಂತ್ ಲೋಪೆಸ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.