ADVERTISEMENT

ಅಂಬೇಡ್ಕರ್ ಕನಸನ್ನು ಬಿಜೆಪಿ ನನಸು ಮಾಡುತ್ತಿದೆ: ನಳಿನ್ ಕುಮಾರ್ ಕಟೀಲ್‌

ಜನಾಶೀರ್ವಾದ ಯಾತ್ರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 13:57 IST
Last Updated 19 ಆಗಸ್ಟ್ 2021, 13:57 IST
ಗುರುವಾರ ಪುರಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.
ಗುರುವಾರ ಪುರಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.   

ಉಡುಪಿ: ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಆದರೆ, ಪ್ರಧಾನಿ ಮೋದಿ ಅತಿ ಹೆಚ್ಚು ಎಸ್‌ಸಿ ಹಾಗೂ ಎಸ್‌ಟಿ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಗುರುವಾರ ಪುರಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಅತಿ ಹೆಚ್ಚು ಮಹಿಳೆಯರು, ಯುವಕರು ಹಾಗೂ ಎಸ್‌ಸಿ ಎಸ್‌ಟಿ ವರ್ಗದವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು, ಅಂಬೇಡ್ಕರ್ ಕನಸನ್ನು ಬಿಜೆಪಿ ನನಸು ಮಾಡುತ್ತಿದೆ ಎಂದರು.

ಚುನಾವಣೆ ಸಂದರ್ಭ ಪಕ್ಷ ನೀಡಿದ್ದ ಪ್ರಣಾಳಿಕೆಗೆ ಬದ್ಧವಾಗಿ ನಡೆದುಕೊಂಡಿದ್ದೇವೆ. 370ನೇ ವಿಧಿ ರದ್ದು ಮಾಡುವ ಮೂಲಕ ಕಾಶ್ಮೀರದ ಹಳ್ಳಿ ಹಳ್ಳಿಗಳಲ್ಲಿ ತ್ರಿವರ್ಣ ಧ್ವಜ ಹಾರಾಡುವಂತಾಗಿದೆ. ದೇಶದ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆಕೊಟ್ಟು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. 18,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅನಿಲ ಭಾಗ್ಯ, ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಇವೆಲ್ಲ ಕಾರ್ಯಗಳು ಕಾಂಗ್ರೆಸ್‌ ಅವಧಿಯಲ್ಲಿ ನಡೆಯಲಿಲ್ಲ ಏಕೆ ಎಂದು ಕಟೀಲ್ ಪ್ರಶ್ನಿಸಿದರು.

ADVERTISEMENT

ಸಂಸತ್ ಅಧಿವೇಶನದಲ್ಲಿ ಸಮಸ್ಯೆಗಳ ಕುರಿತು ಚರ್ಚಿಸಬೇಕಾದ ಕಾಂಗ್ರೆಸ್‌ ಗದ್ದಲ ಎಬ್ಬಿಸುತ್ತಿದೆ. ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಚತುಷ್ಪಥ ರಸ್ತೆಗಳನ್ನು ನಿರ್ಮಾಣ ಮಾಡಿದ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ಅಗೌರವದ ಮಾತುಗಳನ್ನಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಅನುಷ್ಠಾನಕ್ಕೆ ಬಂದ ಅಟಲ್ ಸಾರಿಗೆಯನ್ನು ನಿಲ್ಲಿಸಲಾಗಿದೆ. ಹೆದ್ದಾರಿಗಳಲ್ಲಿ ಅಟಲ್‌ ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ. ಆದರೆ, ಈಗ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ವಿಚಾರದಲ್ಲಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ರೈತರು ಸ್ವಂತ ಜಮೀನಿನಲ್ಲಿ ಬೆಳೆದ ಮರಗಳನ್ನು ಕಡಿದು ಮಾರಾಟ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಈ ಸಮಸ್ಯೆ ಇಲ್ಲ. ಈ ಸಂಬಂಧ ಈಚೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ಅವರೊಂದಿಗೆ ಚರ್ಚಿಸಲಾಗಿದ್ದು, ರಾಜ್ಯದಲ್ಲಿ ರೈತರು ಜಮೀನಿನಲ್ಲಿ ಯಾವುದೇ ಜಾತಿಯ ಮರಗಳನ್ನು ಬೆಳೆಸಲು, ಕಡಿದು ಸಾಗಾಟ ಮಾಡಲು ಅನುಕೂಲ ಮಾಡಿಕೊಡಬೇಕು’ ಎಂದು ತಿಳಿಸಿದ್ದೇನೆ ಎಂದರು.

ಕಾರ್ಯ್ರಮದಲ್ಲಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಮಾತನಾಡಿದರು. ಉಡುಪಿ ಶಾಸಕರಾದ ಕೆ.ರಘುಪತಿ ಭಟ್‌, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಬಿಜೆಪಿ ಮುಖಂಡರಾದ ಯಶ್‌ಪಾಲ್ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.