ADVERTISEMENT

ಕಲೆ, ಕ್ರೀಡೆಗಿದೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ: ಜಯಪ್ರಕಾಶ ಹೆಗ್ಡೆ

ಮಟಪಾಡಿ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ವಜ್ರಮಹೋತ್ಸವ ಸಂಪನ್ನ, ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:47 IST
Last Updated 24 ಫೆಬ್ರುವರಿ 2026, 7:47 IST
ಯಕ್ಷಗಾನ ಕಲಾವಿದರಾದ ಶಾಂತರಾಮ ಆಚಾರ್ಯ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ, ರಘು ಮಡಿವಾಳ ಮಂದಾರ್ತಿ ಅವರಿಗೆ ದಿ.ಗುರು ಮಟಪಾಡಿ ವೀರಭದ್ರ ನಾಯಕ್‌ ಸ್ಮಾರಕ ಪ್ರಶಸ್ತಿ, ಮೊಳಹಳ್ಳಿ ಕೃಷ್ಣ ನಾಯ್ಕ ಅವರಿಗೆ ದಿ.ವೇದಮೂರ್ತಿ ಮಟಪಾಡಿ ಶ್ರೀನಿವಾಸ ಕಲ್ಕೂರ ಸ್ಮಾರಕ ಪ್ರಶಸ್ತಿ ನೀಡಲಾಯಿತು
ಯಕ್ಷಗಾನ ಕಲಾವಿದರಾದ ಶಾಂತರಾಮ ಆಚಾರ್ಯ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ, ರಘು ಮಡಿವಾಳ ಮಂದಾರ್ತಿ ಅವರಿಗೆ ದಿ.ಗುರು ಮಟಪಾಡಿ ವೀರಭದ್ರ ನಾಯಕ್‌ ಸ್ಮಾರಕ ಪ್ರಶಸ್ತಿ, ಮೊಳಹಳ್ಳಿ ಕೃಷ್ಣ ನಾಯ್ಕ ಅವರಿಗೆ ದಿ.ವೇದಮೂರ್ತಿ ಮಟಪಾಡಿ ಶ್ರೀನಿವಾಸ ಕಲ್ಕೂರ ಸ್ಮಾರಕ ಪ್ರಶಸ್ತಿ ನೀಡಲಾಯಿತು   

ಬ್ರಹ್ಮಾವರ: ‘ಕಲೆ ಹಾಗೂ ಕ್ರೀಡೆಯಲ್ಲಿ ಜಾತಿ ಮತ, ಮೇಲು ಕೀಳು ಎಂಬ ಬೇಧ ಭಾವವಿಲ್ಲ. ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಇದೆ’ ಎಂದು ಮುಖಂಡ ಜಯಪ್ರಕಾಶ ಹೆಗ್ಡೆ ಹೇಳಿದರು.

ಮಟಪಾಡಿಯ ದಿ.ಗುರು ವೀರಭದ್ರ ನಾಯಕ್ ವೇದಿಕೆಯಲ್ಲಿ ಭಾನುವಾರ ಮಟಪಾಡಿಯ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿಯ ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಹೊಸ ಪ್ರಯೋಗಗಳು ನಡೆಯಲಿ. ಆದರೆ ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು. ಯಕ್ಷಗಾನದಂತಹ ಕಲೆಗಳಲ್ಲಿ ಮಕ್ಕಳು ಭಾಗವಹಿಸುವುದರಿಂದ ಅವರು ದಾರಿ ತಪ್ಪದಂತೆ ಸರಿದಾರಿಗೆ ತರುವ ಕೆಲಸ ಮಾಡುತ್ತದೆ. ಹೆತ್ತವರು ಇಂತಹ ಕಲೆಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ADVERTISEMENT

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಸನಾತನ ಸಂಸ್ಕೃತಿ ಉಳಿಸುವ ಕೆಲಸ ಯಕ್ಷಗಾನದಿಂದ ಆಗುತ್ತಿದೆ. ಈ ಕಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದಾಗಬೇಕು. ಸಂಘ ಸಂಸ್ಥೆಗಳು ಕಲೆ, ಸಂಸ್ಕೃತಿ, ಯಕ್ಷಗಾನಕ್ಕೆ ಶಕ್ತಿ ನೀಡಿವೆ. ಅದರಿಂದ ಯಕ್ಷಗಾನ ಇಂದೂ ಉಳಿದಿದೆ ಎಂದರು.

ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಗೌರವಾಧ್ಯಕ್ಷ ಎಂ. ಚಂದ್ರಶೇಖರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಹೈದರಾಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ವಕೀಲ ಬೈಕಾಡಿ ಸುಪ್ರಸಾದ ಶೆಟ್ಟಿ, ಮಟಪಾಡಿ ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಿವರಾಮ ಶೆಟ್ಟಿ, ಮುದ್ದು ಜತ್ತನ್ ಮಟಪಾಡಿ, ಬ್ರಹ್ಮಾವರ ರೋಟರಿ ರಾಯಲ್ ಅಧ್ಯಕ್ಷ ಚಂದ್ರಶೇಖರ ನಾಯರಿ, ಉದ್ಯಮಿ ಆಂಡ್ರೊ ಡಿಸಿಲ್ವ ಹಂದಾಡಿ, ಡಾ.ಬಾಲಕೃಷ್ಣ ಶೆಟ್ಟಿ ಕುಂಜಾಲು, ಉದ್ಯಮಿ ವಿಶ್ವನಾಥ ಶೆಟ್ಟಿ ಮಟಪಾಡಿ, ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಗಾಣಿಗ, ಸಂತೋಷ ಲೂವಿಸ್ ಮಟಪಾಡಿ, ಗಿರೀಶ್ಚಂದ್ರ ಆಚಾರ್ಯ, ಯಕ್ಷಗಾನ ತರಬೇತುದಾರ ಪ್ರತೀಶ ಕುಮಾರ್ ಮಟಪಾಡಿ, ಕಲಾ ಮಂಡಳಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ರಾಘವೇಂದ್ರ ಗಾಣಿಗ, ಕಾರ್ಯದರ್ಶಿ ಪ್ರಕಾಶ ಆಚಾರ್ಯ, ಮುದ್ದು ಜತ್ತನ್ ಮಟಪಾಡಿ ಭಾಗವಹಿಸಿದ್ದರು.

ಪ್ರಶಸ್ತಿ ಪ್ರದಾನ: ಪ್ರಸಾಧನ ಕಲಾವಿದ ಶಾಂತರಾಮ ಆಚಾರ್ಯ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ, ಪುಂಡು ವೇಷಧಾರಿ ರಘು ಮಡಿವಾಳ ಮಂದಾರ್ತಿ ಅವರಿಗೆ ದಿ.ಗುರು ಮಟಪಾಡಿ ವೀರಭದ್ರ ನಾಯಕ್‌ ಸ್ಮಾರಕ ಪ್ರಶಸ್ತಿ, ಸ್ತ್ರೀ ವೇಷಧಾರಿ ಮೊಳಹಳ್ಳಿ ಕೃಷ್ಣ ನಾಯ್ಕ ಅವರಿಗೆ ದಿ.ವೇದಮೂರ್ತಿ ಮಟಪಾಡಿ ಶ್ರೀನಿವಾಸ ಕಲ್ಕೂರ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 36 ವರ್ಷಗಳಿಂದ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎಂ. ಚಂದ್ರಶೇಖರ ಕಲ್ಕೂರ ಅವರಿಗೆ ಕಲಾ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷ ಗುರು ಪ್ರತೀಶ್‌ ಕುಮಾರ್‌ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಯಕ್ಷಗಾನ ವಿಮರ್ಶಕ ಎಸ್.ವಿ. ಉದಯ ಕುಮಾರ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ವಿಜಯ, ಈಶ್ವರ ಪೂಜಾರಿ, ಶರೋನ್ ಸೀಕ್ವೆರ ಸನ್ಮಾನ ಪತ್ರ ವಾಚಿಸಿದರು. ಸಂಘದ ದಿನೇಶ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಂದ್ರ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿದರು.

ಯಕ್ಷಗಾನವು ವಿದ್ಯುತ್‌ ಟಿ.ವಿ ರೇಡಿಯೊ ಮೊಬೈಲ್‌ ಇಲ್ಲದ ಕಾಲದಲ್ಲಿ ಜಗತ್ತಿಗೆ ಮಹಾಭಾರತ ರಾಮಾಯಣದ ಪ್ರಸಾರ ಮತ್ತು ಪ್ರಚಾರ ಮಾಡಿತ್ತು. ಯಕ್ಷಗಾನ ಈಗ 20– 20 ಕ್ರಿಕೆಟ್‌ ರೀತಿ ಆಗಿದೆ
-ಕೃಷ್ಣಮೂರ್ತಿ ಮಂಜ, ಮಾರಣಕಟ್ಟೆ ಹೋಟೆಲ್‌ ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.