ADVERTISEMENT

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಕರೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 14:29 IST
Last Updated 15 ಆಗಸ್ಟ್ 2020, 14:29 IST
ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಧ್ವಜಾರೋಹಣ ನೆರವೇರಿಸಿದರು
ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಧ್ವಜಾರೋಹಣ ನೆರವೇರಿಸಿದರು   

ಉಡುಪಿ: ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸ್ವಾತಂತ್ರ್ಯೋತ್ಸವ ಸಮಾರಂಭ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸಿದ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು, 1921ರಲ್ಲಿ ಉಡುಪಿಯಲ್ಲಿ ಆರ್‌.ಎಸ್‌. ಶೆಣೈ ಅವರ ನೇತೃತ್ವದಲ್ಲಿ ನಡೆದ ಜಲಿಯನ್ ವಾಲಾಬಾಗ್ ದಿನಾಚರಣೆ, ಮುಕುಂದ ಪೈಗಳ ನಿವಾಸದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಸಭೆಗಳು, ಕೃಷ್ಣಮಠದ ರಥಬೀದಿಯಲ್ಲಿ ನಡೆಯುತ್ತಿದ್ದ ಹೋರಾಟ ಸಂಬಂಧಿ ಸಭೆ ಸಮಾರಂಭ, ನಾಟಕಗಳನ್ನು ನೆನೆದರು.

ಉಡುಪಿ ಪ್ರಸಕ್ತ ವರ್ಷ ಶೇ 90.71 ಪಿಯುಸಿ ಫಲಿತಾಂಶ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್ಸೆಸ್ಸೆಲ್ಸಿಯಲ್ಲಿ ‘ಎ’ ಶ್ರೇಣಿ ಪಡೆದುಕೊಂಡಿದೆ.ನೆರೆ, ಪ್ರಾಕೃತಿಕ ವಿಕೋಪಗಳನ್ನು ಎದುರಿಸುವಲ್ಲಿಯೂ ಜಿಲ್ಲೆ ಹಿಂದೆ ಬಿದ್ದಿಲ್ಲ. ಕಳೆದ ವರ್ಷ ಅತಿವೃಷ್ಟಿಯಿಂದ ಮನೆ ಕಳೆದುಕೊಂಡಿದ್ದ 557 ಫಲಾನುಭವಿಗಳಿಗೆ ₹ 1.60 ಕೋಟಿ ಪರಿಹಾರ ನೀಡಲಾಗಿದೆ. ₹ 20 ಕೋಟಿ ಅನುದಾನದಲ್ಲಿ ಅತಿವೃಷ್ಟಿ ಕಾಮಗಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಮನೆಬಾಗಿಲಿಗೆ ಪಿಂಚಣಿ ವ್ಯವಸ್ಥೆ ರಾಜ್ಯದಲ್ಲಿಯೇ ಪ್ರಥಮವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, 3,147 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಭೂಮಿ ಯೋಜನೆ, ಹದ್ದುಬಸ್ತು, ಪೋಡಿ, ಭೂಮಿ ಅರ್ಜಿಗಳ ವಿಲೇವಾರಿ, ಸಕಾಲ ಯೋಜನೆ ಕಾರ್ಯಗತಗೊಳಿಸುವಲ್ಲಿಯೂ ಮಾದರಿಯಾಗಿದೆ ಎಂದರು.‌

ಜಿಲ್ಲೆಯ ಎಲ್ಲ ಬೀಚ್‌ಗಳಿಗೆ ಬ್ಲೂ ಫ್ಲಾಗ್ ಮಾನ್ಯತೆ, ಸೇಂಟ್ ಮೇರಿಸ್ ದ್ವೀಪದಲ್ಲಿ ₹ 4.2 ಕೋಟಿ ವೆಚ್ಚದಲ್ಲಿ ಜಟ್ಟಿ ನಿರ್ಮಾಣ, ₹ 2.50 ಕೋಟಿ ವೆಚ್ಚದಲ್ಲಿ ಮಲ್ಪೆ ಸೀ ವಾಕ್ ಅಭಿವೃದ್ಧಿ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳಳಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲ್ಯಾಬ್‌, 60 ಆಮ್ಲಜನಕ ಪೂರೈಕೆ ವ್ಯವಸ್ಥೆಯ ಬೆಡ್‌, ಜಿಲ್ಲಾ ಆಸ್ಪತ್ರೆಯ 120 ಬೆಡ್‌ಗಳಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸುವ ಕೆಲಸ ಅಂತಿಮ ಹಂತದಲ್ಲಿದೆ ಎಂದರು.

ಕೋವಿಡ್‌ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದ್ದು, ಸೋಂಕಿನ ವಿರುದ್ಧ ಎಲ್ಲ ದೇಶಗಳು ಹೋರಾಟ ನಡೆಸುತ್ತಿವೆ. ಸಾರ್ವಜನಿಕರು ಸುರಕ್ಷಿತ ಅಂತರ ಹಾಗೂ ಮಾಸ್ಕ್‌ ಧರಿಸುವ ಮೂಲಕ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್ ಮಾರ್ಗಸೂಚಿಯನ್ವಯ ಅಂತರ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲಾ ಪಂಚಾಯಿತಿಯಿಂದ ಸ್ವಚ್ಛ ಭಾರತ್ ಮಿಷನ್ ಪ್ರಗತಿ ಕುರಿತು ಕಿರು ಪುಸ್ತಕ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆ ಎಸ್‌ಪಿ ಚೇತನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.