ADVERTISEMENT

ಉಡುಪಿ: ಹೆಬ್ರಿ ತಾಲ್ಲೂಕಿನಲ್ಲಿ ಜಂಟಿ ಸರ್ವೆ ಆರಂಭ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:19 IST
Last Updated 3 ಡಿಸೆಂಬರ್ 2025, 7:19 IST
<div class="paragraphs"><p>ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯವನ್ನು ಮಂಗಳವಾರ ಆರಂಭಿಸಲಾಯಿತು.</p></div>

ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯವನ್ನು ಮಂಗಳವಾರ ಆರಂಭಿಸಲಾಯಿತು.

   

ಹೆಬ್ರಿ: ತಾಲ್ಲೂಕಿನಲ್ಲಿ ಅಕ್ರಮ ಸಾಗುವಳಿದಾರರಿಗೆ ಜಮೀನುಗಳ ಪಟ್ಟಾ ಹಕ್ಕುಪತ್ರ ನೀಡಲು ಸರ್ಕಾರ, ಜಿಲ್ಲಾಧಿಕಾರಿ ನಿರ್ದೇಶನದಂತೆ ಮಂಗಳವಾರ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಭೂ ಮಾಪನಾ, ಭೂದಾಖಲೆಗಳ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಆರಂಭಿಸಿದ್ದಾರೆ.

ಅಕ್ರಮ ಸಕ್ರಮದಡಿ ಅರ್ಜಿ ನಮೂನೆ 50, 53, 57ರಡಿ ಅರ್ಜಿ ಸಲ್ಲಿಸಿದ ತಾಲ್ಲೂಕಿನ ನಾಡ್ಪಾಲು ಗ್ರಾಮದ 150 ಮತ್ತು ಹೆಬ್ರಿ ಗ್ರಾಮದ 100ಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಅರಣ್ಯ, ಕಂದಾಯ ಇಲಾಖೆಯ ಭೂಮಿಯನ್ನು ಜಂಟಿ ಸರ್ವೆ ನಡೆಸಿ ಪಟ್ಟಾಪತ್ರ ದೊರಕಿಸುವಂತೆ ಆದೇಶ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಸಾಮಾಜಿಕ ಹೋರಾಟಗಾರ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ, ಸಾಮಾಜಿಕ ಸೇವಾ ಟ್ರಸ್ಟ್‌ ಹೆಬ್ರಿ ಕಾರ್ಕಳದ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅವರು  ಮುಖ್ಯಮಂತ್ರಿ, ಕಂದಾಯ, ಅರಣ್ಯ ಇಲಾಖೆ ಸಚಿವರಿಗೆ ಈಚೆಗೆ ಮನವಿ ನೀಡಿದ್ದರು.

ADVERTISEMENT

ಪರಭಾದಿತ ಅರಣ್ಯ ಪ್ರದೇಶವಿದ್ದಲ್ಲಿ, ಅದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳಲ್ಲಿ ಗೊಂದಲಗಳಿದ್ದರೆ ಕಂದಾಯ ಇಲಾಖೆಯಿಂದ ಪ್ರಸ್ತಾವನೆಯನ್ನು ನಿಯಮನುಸಾರ ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಕಳುಹಿಸುವಂತೆ ರಾಜ್ಯದ ಸರ್ಕಾರದ ಪ್ರಧಾನ ಕಾರ್ಯದರ್ಶಿ ಈಗಾಗಲೇ ನಿರ್ದೇಶನ ನೀಡಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.

ನಾಡ್ಪಾಲು ಗ್ರಾಮದ ಸರ್ವೆ ನಂಬರ್‌ 126ರಲ್ಲಿ 28,205 ಎಕ್ರೆ, ಹೆಬ್ರಿ ಗ್ರಾಮದ ಸರ್ವೆ ನಂಬರ್‌ 210ರಲ್ಲಿ 2,238 ಎಕ್ರೆ ಸೇರಿ ಒಟ್ಟು 30,343 ಎಕ್ರೆ ವಿಸ್ತೀರ್ಣವಿದೆ. ಆದರೆ ಹೆಬ್ರಿ ವಲಯದ ಅರಣ್ಯ ದಾಖಲೆಗಳ ಪ್ರಕಾರ 26,653 ಎಕ್ರೆ ಮಾತ್ರ ಅರಣ್ಯ ಪ್ರದೇಶವಾಗಿದ್ದು, ಉಳಿದ 1550 ಎಕ್ರೆಗೂ ಹೆಚ್ಚಿನ ಕಂದಾಯ ಅನಾಧೀನ ಭೂಮಿ 2 ಸರ್ವೆ ನಂಬರ್‌ಗಳಲ್ಲಿ ಅಡಕವಾಗಿವೆ.

ಈ ಜಮೀನುಗಳನ್ನು ಜಂಟಿ ಸರ್ವೆ ನಡೆಸಿದರೆ 60 ವರ್ಷಗಳಿಂದ ಸಾಗುವಾಳಿ ಮಾಡಿಕೊಂಡು ಅರಣ್ಯ ಇಲಾಖೆಯ ತಾಂತ್ರಿಕ ಸಮಸ್ಯೆಗಳಿಂದ ಜಾಗದ ಹಕ್ಕುಪತ್ರಕ್ಕಾಗಿ ಎದುರು ನೋಡುತ್ತಿರುವ ಜನರಿಗೆ ನ್ಯಾಯ ದೊರೆಯುವ ಮೂಲಕ ಬಡ ಕೃಷಿಕರಿಗೆ ಅಕ್ರಮ ಸಕ್ರಮ ಕಾಯ್ದೆಯಂತೆ ಪಟ್ಟಾಪತ್ರ ನೀಡಲು ಅವಕಾಶವಿದೆ ಎಂದು ಅಕ್ರಮ ಸಕ್ರಮ ಸಮಿತಿ ಮಾಜಿ ಅಧ್ಯಕ್ಷರೂ ಆಗಿರುವ ನೀರೆ ಕೃಷ್ಣ ಶೆಟ್ಟಿಹೇಳಿದರು.

‘ಸರ್ಕಾರ, ಜಿಲ್ಲಾಧಿಕಾರಿ ನಿರ್ದೇಶನದಂತೆ ಜಂಟಿ ಸರ್ವೆ ನಡೆಯುತ್ತಿದೆ. ನಾಡ್ಪಾಲಿನ ಬಳಿಕ ವರಂಗ, ಶಿವಪುರ, ಅಂಡಾರು ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಸರ್ವೆ ನಡೆಯಲಿದೆ. ಅರಣ್ಯ ಇಲಾಖೆಯ ಅನುಮೋದನೆ ಬಳಿಕ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ’ ಎಂದು ತಹಶೀಲ್ದಾರ್‌ ಎಸ್.ಎ. ಪ್ರಸಾದ್‌ ತಿಳಿಸಿದರು. 

‘ಹೋರಾಟದ ಫಲ’
ಅಕ್ರಮ ಸಾಗುವಾಳಿದಾರರಿಗೆ ಅರಣ್ಯ ಇಲಾಖೆಯ ಸಮಸ್ಯೆಯಿಂದಾಗಿ ಹಲವು ವರ್ಷಗಳಿಂದ ಹಕ್ಕುಪತ್ರ ದೊರೆಯದೆ ಸಮಸ್ಯೆಯಾಗಿತ್ತು. ಹಲವು ಹೋರಾಟದ ಬಳಿಕ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಇದರಿಂದ ನೂರಾರು ಜನರಿಗೆ ಸಹಾಯವಾಗಲಿದೆ. ಬಹುತೇಕ ಮಂದಿಗೆ ತಮ್ಮ ಜಮೀನಿಗೆ ಪಟ್ಟಾ ದೊರಯಲಿದೆ ಎಂದು ಸಾಮಾಜಿಕ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.