
ಕೋಟ (ಬ್ರಹ್ಮಾವರ): ಕಲಾವಿದ ಪ್ರಸಂಗದ ಚೌಕಟ್ಟು ಮೀರಿ ವ್ಯವಹರಿಸುವುದು ಕಲೆಯ ಬೆಳವಣಿಗೆಗೆ ಮಾರಕ. ಯಕ್ಷಗಾನ ಕಲಾವಿದರು ಸಮಾಜಕ್ಕೆ ಉತ್ತಮ, ಮೌಲ್ಯ, ಸಂದೇಶಗಳನ್ನು ನೀಡುವಂತಾಗಬೇಕು ಎಂದು ಮುಖಂಡ ಜಯಪ್ರಕಾಶ ಹೆಗ್ಡೆ ಕೆ. ಹೇಳಿದರು.
ಸಾಲಿಗ್ರಾಮ ಮಕ್ಕಳ ಮೇಳದ ಕೋಟದ ಪಟೇಲರ ಮನೆಯಂಗಣದಲ್ಲಿ ಆಯೋಜಿಸಿದ ಉಡುಪ ಸಂಸ್ಮರಣೆ, ಉಡುಪ ಹಂದೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕಾರ್ಕಡ ಶ್ರೀನಿವಾಸ ಉಡುಪ, ಶ್ರೀಧರ ಹಂದೆ ಅವರು ಸಾಲಿಗ್ರಾಮ ಮಕ್ಕಳ ಮೇಳದ ಮೂಲಕ ಐದು ದಶಕಗಳಿಂದ ಕಿರಿಯರಿಂದ ಹಿರಿಯರಿಗೆ ರಸದೌತಣ ನೀಡಿದ್ದಾರೆ. ಉಡುಪ, ಹಂದೆಯವರ ಬದುಕು ಎಲ್ಲರಿಗೂ ಆದರ್ಶ ಎಂದು ಹೇಳಿದರು.
ಸಾಲಿಗ್ರಾಮ ಮಕ್ಕಳ ಮೇಳದ ಅಧ್ಯಕ್ಷ ಬಲರಾಮ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಿ. ಶಂಕರ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ, ಕರ್ಣಾಟಕ ಬ್ಯಾಂಕ್ ಅಧಿಕಾರಿ ವಾದಿರಾಜ, ಮಕ್ಕಳ ಮೇಳದ ಸ್ಥಾಪಕ ಶ್ರೀಧರ ಹಂದೆ, ಟ್ರಸ್ಟಿ ಶ್ರೀಧರ ಉಡುಪ, ಶ್ರೀಮತಿ ಕಲ್ಕೂರ ಭಾಗವಹಿಸಿದ್ದರು.
ಮಕ್ಕಳ ಮೇಳದ ಹಿರಿಯ ಕಲಾವಿದ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿಯಂತರ ಪ್ರದೀಪ ಶೆಟ್ಟಿ ಉಡುಪ ಸಂಸ್ಮರಣಾ ಮಾತುಗಳನ್ನಾಡಿದರು. ಕಲಾವಿದ ಮೊಳಹಳ್ಳಿ ಕೃಷ್ಣ ಮೊಗವೀರ ಅವರಿಗೆ ಉಡುಪ ಪ್ರಶಸ್ತಿ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಅವರಿಗೆ ಹಂದೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಸ್ವಾಗತಿಸಿದರು. ಉಪಾಧ್ಯಕ್ಷ ಜನಾರ್ದನ ಹಂದೆ ವಂದಿಸಿದರು. ಪ್ರಣೂತ್ ಗಾಣಿಗ, ಮಾಧುರಿ ಶ್ರೀರಾಮ್ ನಿರ್ವಹಿಸಿದರು. ವಿನೀತಾ, ಕಾವ್ಯ ಸಹಕರಿಸಿದರು. ದಿವ್ಯಾ ಕಾರಂತ, ಜಯಲಕ್ಷ್ಮಿ ಕಾರಂತ ಅವರಿಂದ ಗಮಕ ಕಾರ್ಯಕ್ರಮ, ಸಾಲಿಗ್ರಾಮ ಶ್ರೀಗುರು ಪ್ರಸಾದಿತ ಮೇಳದಿಂದ ‘ಕೃಷ್ಣಾರ್ಜುನ’ ಯಕ್ಷಗಾನ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.