ADVERTISEMENT

ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ ಕಾಡೂರು ಗ್ರಾ.ಪಂ. ಅಧ್ಯಕ್ಷ ಆಯ್ಕೆ

ಸ್ವಚ್ಛತಾ ಅನುಷ್ಠಾನ ಹಾಗೂ ನಾಗರೀಕ ಸಹಭಾಗಿತ್ವಕ್ಕೆ ಸಂದ ಗೌರವ ಜಲಂಧರ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 4:58 IST
Last Updated 14 ಸೆಪ್ಟೆಂಬರ್ 2025, 4:58 IST

ಕಾಡೂರು (ಬ್ರಹ್ಮಾವರ): ಸ್ವಚ್ಛ ಭಾರತ್ ಕಾರ್ಯಕ್ರಮದಡಿ ಘನ ಸಂಪನ್ಮೂಲ ನಿರ್ವಹಣೆ, ನಾಗರಿಕ ಜಾಗೃತಿ, ವಿಶೇಷ ಕಾರ್ಯ ಚಟುವಟಿಕೆಗಳ ಅನುಷ್ಠಾನದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ತಾಲ್ಲೂಕಿನ ಕಾಡೂರು ಗ್ರಾಮ ಪಂಚಾಯಿತಿ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಗುಣಮಟ್ಟ ಶಾಖೆಯ ಸರಪಂಚ ಸಂವಾದ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಪಂಚಾಯಿತಿ ಅಧ್ಯಕ್ಷ ಜಲಂಧರ ಶೆಟ್ಟಿ ಆಯ್ಕೆಯಾಗಿದ್ದಾರೆ.

ಅವರು ದೆಹಲಿಯಲ್ಲಿ ಇದೇ 15ರಂದು ನಡೆಯುವ ಸಮಾರಂಭದಲ್ಲಿ ಭಾಗವಹಿಸಿ, ಗ್ರಾಮೀಣ ಹಂತದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಯಶೋಗಾಥೆಗಳನ್ನು ವಿವರಿಸಲಿದ್ದಾರೆ.

ಕೇಂದ್ರ ಸರ್ಕಾರದ ‘ವಿಕಸಿತ ಗ್ರಾಮ– ವಿಕಸಿತ ಭಾರತ’ ಪರಿಕಲ್ಪನೆಯಡಿ ದೇಶದ ವಿವಿಧ ರಾಜ್ಯಗಳ 75 ಕ್ರಿಯಾಶೀಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರನ್ನು ಯಶೋಗಾಥೆ ಮಂಡನೆಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕದಿಂದ ಆಯ್ಕೆಯಾದ 3 ಗ್ರಾಮ ಪಂಚಾಯಿತಿ ಅಧ್ಯಕ್ಷರ ಪೈಕಿ ಕಾಡೂರಿನ ಜಲಂಧರ ಶೆಟ್ಟಿ ಒಬ್ಬರಾಗಿದ್ದು, ಕಾರ್ಕಳದ ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಖೇಶ ಹೆಗ್ಡೆ, ಹಾಸನದ ಸಕಲೇಶಪುರದ ಬಿರಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಎಂ.ಡಿ. ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಸರಪಂಚ ಸಂವಾದ ಕಾರ್ಯಕ್ರಮದ ಸ್ವಚ್ಛ– ಸುಜಲ ಜನ ಸಹಭಾಗಿತ್ವ ಪ್ರತಿಜ್ಞಾನಷ್ಟಾನ ಸ್ಪರ್ಧೆಯಲ್ಲಿ ರಾಷ್ಟ್ರೀಯ ಹಂತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಕಾಡೂರು ಗ್ರಾಮ ಪಂಚಾಯಿತಿ ಇದೀಗ ಸ್ವಚ್ಛತಾ ನವೀನ್ಯತಾ ಕಾರ್ಯ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿ ನಾಗರೀಕರ ಸಹಭಾಗಿತ್ವದೊಂದಿಗೆ ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಂತದಲ್ಲಿ ಮಂಡನೆಗೆ ಅವಕಾಶ ಲಭ್ಯವಾದಂತಾಗಿದೆ.

ಜಲಂಧರ ಶೆಟ್ಟಿ ಪ್ರತಿಕ್ರಿಯಿಸಿ, ಗ್ರಾಮ ಪಂಚಾಯಿತಿಯ ಈ ಹಿಂದಿನ ಅವಧಿಯ ಎಲ್ಲಾ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಂಸದರು, ಶಾಸಕರ ಮಾರ್ಗದರ್ಶನ, ಹಿರಿಯ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳ ಕ್ರಿಯಾಶೀಲ ಸಮನ್ವಯದಿಂದ ಸ್ವಚ್ಛತಾ ಚಟುವಟಿಕೆಗಳ ನವೀನತೆಯ ಅನುಷ್ಠಾನ ಯಶಸ್ವಿಯಾಗಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಪಂಚಾಯಿತಿಯ ಪ್ರತಿನಿಧಿಯಾಗಿ ರಾಷ್ಟ್ರೀಯ ಹಂತದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ್, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಸ್ವಚ್ಛತಾ ಕಾರ್ಯ ಚಟುವಟಿಕೆಗಳನ್ನು ಸ್ವಚ್ಛ ಸಂಕೀರ್ಣದಿಂದ ಆರಂಭಿಸಿ ಮಿನಿ ಎಂ.ಆರ್.ಎಫ್ ಆಧುನಿಕ ವ್ಯವಸ್ಥೆಯವರಿಗೆ ವಿಸ್ತರಿಸಿದ್ದು, ಜನಪ್ರತಿನಿಧಿಗಳು, ಸ್ಥಳೀಯ ನಾಗರೀಕರ ಉತ್ಸಾಹದ ಸಹಭಾಗಿತ್ವ ಈ ಮನ್ನಣೆಗೆ ಕಾರಣವಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ ಕೆ. ಹೇಳಿದರು.

ಕೇಂದ್ರ ಸರ್ಕಾರದ ಸರಪಂಚ್ ಸಂವಾದ್ ಯಶೋಗಾಥಾ ಸಮಾವೇಶಕ್ಕೆ ಸ್ವಚ್ಛತೆ, ಸಶಕ್ತೀಕರಣ, ಜಲಸಮೃದ್ಧಿ,  ಪಾರದರ್ಶಕತೆ, ಆರೋಗ್ಯ– ಪೌಷ್ಟಿಕತೆ ಸೇರಿದಂತೆ ವಿಷಯಧಾರಿತ ಯಶೋಗಾಥೆಗಳಡಿ ಉಡುಪಿ ಜಿಲ್ಲೆಯ ಕಾಡೂರು, ಕಡ್ತಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರನ್ನು ತಂತ್ರಾಂಶದ ನಮೂದಿನ ಅನುಸಾರ ರಾಷ್ಟ್ರೀಯ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ಇನ್ನಷ್ಟು ಹೊಸತನದ ಕಾರ್ಯಗಳ ಅನುಷ್ಠಾನಕ್ಕೆ ಪ್ರೇರಣೆಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದರು.

ಕಾಡೂರು ಗ್ರಾಮ ಪಂಚಾಯಿತಿ ಹೊರನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.