ADVERTISEMENT

ಕಾಲರಾ: 23ಕ್ಕೇರಿದ ಪ್ರಕರಣಗಳ ಸಂಖ್ಯೆ

ಸ್ವಚ್ಛತೆಗೆ ಆದ್ಯತೆ ನೀಡಲು ಅಧಿಕಾರಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 5:50 IST
Last Updated 21 ಸೆಪ್ಟೆಂಬರ್ 2024, 5:50 IST
ನಗರಸಭೆಯ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ಉಡುಪಿಯ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಲಾಯಿತು
ನಗರಸಭೆಯ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ಉಡುಪಿಯ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಲಾಯಿತು   

ಉಡುಪಿ: ಜಿಲ್ಲೆಯಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ ಶುಕ್ರವಾರ 23ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನಾ ತಿಳಿಸಿದ್ದಾರೆ.

ಮಲ್ಪೆಯಲ್ಲಿ 5 ಪ್ರಕರಣಗಳು, ಕಟಪಾಡಿಯಲ್ಲಿ 1 ಮತ್ತು ಕಾಪುವಿನಲ್ಲಿ ಎರಡು ಪ್ರಕರಣಗಳು ಶುಕ್ರವಾರ ದೃಢಪಟ್ಟಿವೆ ಎಂದು ಅವರು ತಿಳಿಸಿದ್ದಾರೆ.

ಮಲ್ಪೆಯಲ್ಲಿ ಮೀನುಗಾರಿಕೆಯ ಕೆಲಸ ಮಾಡುತ್ತಿರುವ ವಿಶಾಖಪಟ್ಟಣಂ, ಬಿಹಾರ ಮೊದಲಾದ ರಾಜ್ಯಗಳ ಕಾರ್ಮಿಕರಿಗೆ ಕಾಲರಾ ಬಾಧಿಸಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರಿಗೂ ರೋಗ ಬಾಧಿಸಿದೆ ಎಂದು ವಿವರಿಸಿದರು.

ADVERTISEMENT

ಮೀನುಗಾರಿಕೆಗೆ ತೆರಳುವವರು ಗೋವಾ ಸೇರಿದಂತೆ ವಿವಿಧೆಡೆ ತೆರಳುತ್ತಾರೆ ಅಂತಹವರಿಂದ ಕಾಲರಾ ಬಂದಿರುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಕಾಲರಾ ಬಾಧಿಸಿರುವ ಹೆಚ್ಚಿನವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಕೆಲವರು ಚಿಕಿತ್ಸೆಯಲ್ಲಿದ್ದಾರೆ. ಈ ರೋಗಿಗಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ರೋಗ ಉಲ್ಬಣವಾಗಿದ್ದ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಮತ್ತು ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅವರು ಅಲ್ಲಿ ಚೇತರಿಸಿಕೊಂಡಿದ್ದಾರೆ ಎಂದೂ ವಿವರಿಸಿದರು.

ಡಾ.ಗಡಾದ್‌

ರೋಗ ಹರಡದಂತೆ ಎಚ್ಚರ ವಹಿಸಿ

ಕಾಲರಾ ಪ್ರಕರಣಗಳು ಕಂಡುಬಂದಿರುವ ಕಾರಣ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಸೋಂಕು ಇರುವ ಆಹಾರ ಅಥವಾ ಕಲುಷಿತ ನೀರಿನ ಸೇವನೆಯಿಂದ ಕಾಲರಾ ಬ್ಯಾಕ್ಟಿರಿಯಾ ದೇಹ ಪ್ರವೇಶಿಸುತ್ತದೆ. ಮನೆಗೆ ತರುವ ಎಲ್ಲಾ ತರಕಾರಿ ಹಣ್ಣು ಹಾಗೂ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ನೀರಿನಿಂದ ತೊಳೆದುಬಳಸಬೇಕು ಎಂದು ನಗರಸಭೆಯ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಹೊಟೇಲ್ ರೆಸ್ಟೋರೆಂಟ್‌ಗಳಲ್ಲಿ ಕುಡಿಯಲು ಬಿಸಿ ನೀರನ್ನೇ ನೀಡಬೇಕು. ಹೋಟೆಲ್‌ಗಳಲ್ಲಿ ಬಳಸುವ ಲೋಟ ತಟ್ಟೆ ಹಾಗೂ ಪಾತ್ರೆಗಳನ್ನೂ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನಗಳನ್ನು ಮುಟ್ಟಿದಾಗ ಸರಿಯಾಗಿ ಕೈತೊಳೆದು ನಂತರ ಆಹಾರ ಸೇವಿಸಬೇಕು ಎಂದೂ ಹೇಳಿದೆ. ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಆಹಾರ ಹಾಗೂ ಹಣ್ಣುಗಳನ್ನು ಸೇವಿಸಬಾರದು. ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಸೇವಿಸುವಂತೆ ಅರಿವು ಮೂಡಿಸಬೇಕು ಎಂದೂ ಸಲಹೆ ನೀಡಲಾಗಿದೆ. ಬಸ್ ನಿಲ್ದಾಣ ರೈಲು ನಿಲ್ದಾಣ ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯವನ್ನು ಕಾಪಾಡಬೇಕು ಎಂದಿದೆ.

ರೋಗ ಲಕ್ಷಣ ಕಾಲರಾ

ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದ್ದು ವಾಕರಿಕೆ ಹಠಾತ್ ಅತಿಸಾರ ತೀವ್ರ ನಿರ್ಜಲೀಕರಣ ವಾಂತಿ ಆಯಾಸ ಒಣ ಬಾಯಿ ದಣಿವು ತೀವ್ರ ಬಾಯಾರಿಕೆ ರೋಗದ ಲಕ್ಷಣವಾಗಿದೆ. ಮಕ್ಕಳಲ್ಲಿ ತೀವ್ರ ನಿದ್ರಾಹೀನತೆ ಜ್ವರ ಸೆಳೆತದಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.

- ಮೂರು ತಂಡ ರಚನೆ

ಹೋಟೆಲ್‌ ಬಾರ್‌ ಫಾಸ್ಟ್‌ಫುಡ್‌ ಮಾರಾಟ ಮಾಡುವವರಿಗೆ ಸ್ವಚ್ಛತೆ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇದಕ್ಕಾಗಿ ನಗರಸಭೆ ವತಿಯಿಂದ ಮೂರು ತಂಡಗಳನ್ನು ರಚಿಸಲಾಗಿದೆ. ಇವರು ಮಲ್ಪೆ ಮಣಿಪಾಲ ಮತ್ತು ಉಡುಪಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವೆಡೆ ನಾನು ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ಆಳ ಸಮುದ್ರಗಳಿಗೆ ತೆರಳುವ ಬೋಟ್‌ಗಳ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದಿಲ್ಲ. ಇದರ ನೀರನ್ನೇ ಮೀನುಗಾರರು ಕುಡಿಯುತ್ತಾರೆ ಇದರಿಂದಲೂ ಕಾಲರಾ ಬಂದಿರುವ ಸಾಧ್ಯತೆ ಇದೆ. ಬೋಟ್‌ಗಳ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದರು.

‘ಜಿಲ್ಲೆಯಾದ್ಯಂತ ನಿಗಾ ಇರಿಸಿದ್ದೇವೆ’

2016ರಲ್ಲಿ ಜಿಲ್ಲೆಯಲ್ಲಿ ಕಾಲರಾ ಪ್ರಕರಣಗಳು ಕಾಣಿಸಿಕೊಂಡಿದ್ದವು ಮತ್ತು ಇಬ್ಬರು ಮೃತಪಟ್ಟಿದ್ದರು. 2019ರಲ್ಲೂ ಪ್ರಕರಣಗಳು ವರದಿಯಾಗಿದ್ದವು. ಈ ಸಲ ಈದುವಿನಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ಬಳಿಕ ನಾವು ಜಿಲ್ಲೆಯಾದ್ಯಂತ ನಿಗಾ ಇರಿಸಿದ್ದೇವೆ. ಮನೆ ಮನೆಗಳಲ್ಲಿ ಸಮೀಕ್ಷೆ ಕಾರ್ಯವನ್ನೂ ಆರಂಭಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದ್ದೇವೆ. ಎಲ್ಲೂ ಬೆಡ್‌ಗಳ ಕೊರತೆ ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ. ಗಡಾದ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.