ಕಾರ್ಕಳ (ಉಡುಪಿ): ತಾಲ್ಲೂಕಿನ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಕೊಟ್ಟಿಗೆಯಲ್ಲಿ ಬೆಂಕಿ ಅನಾಹುತ ಸಂಭವಿಸಿ, ಕಂಬಳದ ಎರಡು ಕೋಣಗಳು ಮೃತಪಟ್ಟಿವೆ.
ಬೇಲಾಡಿ ಬಾವಾ ಅಶೋಕ್ ಶೆಟ್ಟಿ ಅವರ ಅಪ್ಪು ಮತ್ತು ತೋನ್ಸೆ ಎಂಬ ಹೆಸರಿನ ಕೋಣಗಳು ಸುಟ್ಟು ಕರಕಲಾಗಿವೆ. ಬೆಂಕಿ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಕೋಣಗಳ ಚಾಕರಿ ಮಾಡುವವರೂ ಮನೆಗೆ ತೆರಳಿದ್ದರಿಂದ ಇದು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.
ಕೊಟ್ಟಿಗೆಗೆ ತಾಗಿಕೊಂಡಿದ್ದ ಭತ್ತದ ಬಣವೆಯು ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆಯಿಂದ ಕೋಣಗಳು ಮೃತಪಟ್ಟಿವೆ.
ಕಂಬಳದ ಕೋಣಗಳನ್ನು ಕಟ್ಟಿರುವ ಕೊಟ್ಟಿಗೆಯ ಮೇಲ್ಚಾವಣಿಯಲ್ಲಿ ಮರದ ಹಲಗೆಗಳನ್ನು ಜೋಡಿಸಿ ಅದರಲ್ಲಿ ಹುಲ್ಲು ದಾಸ್ತಾನು ಮಾಡಲಾಗಿತ್ತು. ಬೆಂಕಿ ಹೊತ್ತಿಕೊಂಡಾಗ ಹುಲ್ಲಿನ ದಾಸ್ತಾನು ಪೂರ್ಣವಾಗಿ ಸುಟ್ಟು, ಅದರ ಅಡಿಯಲ್ಲಿ ಕಟ್ಟಿದ ಒಂದು ಕೋಣದ ಮೈಮೇಲೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಎರಡು ಕೋಣಗಳು 2022- 23ರ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ತೋನ್ಸೆ ಕೋಣವು ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಅಡ್ಡ ಹಲಗೆ, ಕನೆಹಲಗೆ ವಿಭಾಗದಲ್ಲಿ ಸ್ಪರ್ಧಿಸಿ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿತ್ತು.
ಕೊಟ್ಟಿಗೆಯ ಹಿಂಭಾಗದಲ್ಲಿ ಹೊಂಡ ತೋಡಿ ಅವುಗಳಿಗೆ ಹೊಸ ವಸ್ತ್ರ ತೊಡಿಸಿ ಹೂಮಾಲೆ ಅರ್ಪಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.