ADVERTISEMENT

ಕನ್ನಡ ಕಾವ್ಯ ಲೋಕದಲ್ಲಿ ನಿರ್ವಾತ: ಡಾ.ನಾ.ಮೊಗಸಾಲೆ

ಡಾ.ಯು.ಪಿ.ಉಪಾಧ್ಯಾಯ ಹಾಗೂ ಕಡೆಂಗೋಡ್ಲು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 15:47 IST
Last Updated 9 ಆಗಸ್ಟ್ 2022, 15:47 IST
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಡಾ.ಯು.ಪಿ.ಉಪಾಧ್ಯಾಯ ಹಾಗೂ ಡಾ.ಸುಶೀಲಾ ಉಪಾಧ್ಯಾಯ ಪ್ರಶಸ್ತಿಯನ್ನುಡಾ.ಎಸ್‌.ಆರ್‌.ವಿಘ್ನೇಶ್ ಅವರಿಗೆ ಹಾಗೂ ಕಡೆಂಗೋಡ್ಲು ಪ್ರಶಸ್ತಿಯನ್ನು ಡಾ.ರತ್ನಾಕರ ಸಿ.ಹುನಗೋಡು ಅವರಿಗೆ ಪ್ರದಾನ ಮಾಡಲಾಯಿತು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಡಾ.ಯು.ಪಿ.ಉಪಾಧ್ಯಾಯ ಹಾಗೂ ಡಾ.ಸುಶೀಲಾ ಉಪಾಧ್ಯಾಯ ಪ್ರಶಸ್ತಿಯನ್ನುಡಾ.ಎಸ್‌.ಆರ್‌.ವಿಘ್ನೇಶ್ ಅವರಿಗೆ ಹಾಗೂ ಕಡೆಂಗೋಡ್ಲು ಪ್ರಶಸ್ತಿಯನ್ನು ಡಾ.ರತ್ನಾಕರ ಸಿ.ಹುನಗೋಡು ಅವರಿಗೆ ಪ್ರದಾನ ಮಾಡಲಾಯಿತು.   

ಉಡುಪಿ: ಸಾಹಿತ್ಯ ವಲಯದಲ್ಲಿ ಸಾಂಸ್ಕೃತಿಕ ದಿವಾಳಿತನ ಕಾಣುತ್ತಿದ್ದು ಕನ್ನಡ ಕಾವ್ಯ ಲೋಕದಲ್ಲಿ ನಿರ್ವಾತ ಸೃಷ್ಟಿಯಾಗಿದೆ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಾಹೆಯಿಂದ ಹಮ್ಮಿಕೊಂಡಿದ್ದ ಡಾ.ಯು.ಪಿ.ಉಪಾಧ್ಯಾಯ ಹಾಗೂ ಡಾ.ಸುಶೀಲಾ ಉಪಾಧ್ಯಾಯ, ಕಡೆಂಗೋಡ್ಲು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಲಾಭಿ ಹೆಚ್ಚಾಗಿದ್ದು, ಮಾನದಂಡಗಳ ಪ್ರಕಾರ ಸ್ಪರ್ಧೆಗಳು ನಡೆಯುತ್ತಿಲ್ಲ. ಪ್ರಶಸ್ತಿ ನಿರ್ಧರಿಸುವವರಿಗೆ ಉಸಿರುಗಟ್ಟುವ ವಾತಾವರಣ ಇದೆ ಎಂದು ಅಸಮಾಧಾನ ಹೊರಹಾಕಿದ ಅವರು, ರಾಜ್ಯದಲ್ಲಿ ಸಾಹಿತಿಗಳು, ಗಣ್ಯರ ಹೆಸರಿನಲ್ಲಿ 22 ಟ್ರಸ್ಟ್‌ಗಳಿದ್ದು ಕರಾವಳಿಯಲ್ಲಿ ಯಾರೊಬ್ಬರ ಹೆಸರಿನಲ್ಲಿ ಟ್ರಸ್ಟ್‌ಗಳಿಲ್ಲ ಎಂದರು.

ADVERTISEMENT

ಕರಾವಳಿಯ ಜನಪ್ರತಿನಿಧಿಗಳಿಗೆ ಸಾಂಸ್ಕೃತಿಕ ಕಾಳಜಿ ಇಲ್ಲ. ಕಾಂತಾವರ ಕನ್ನಡ ಭವನದ ದುರಸ್ತಿಗೆ, ನವೀಕರಣಕ್ಕೆ ಅನುದಾನ ಕೇಳಿದರೆ ನವೀಕರಣಕ್ಕೆ ಅನುದಾನ ನೀಡಲು ಸಾದ್ಯವಿಲ್ಲ ಎಂಬ ಉತ್ತರ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ಯು.ಪಿ.ಉಪಾಧ್ಯಾಯ ಹಾಗೂ ಡಾ.ಸುಶೀಲಾ ಉಪಾಧ್ಯಾಯ ಪ್ರಶಸ್ತಿಯನ್ನು ಡಾ.ಎಸ್‌.ಆರ್‌.ವಿಘ್ನೇಶ್ ಅವರಿಗೆ ಹಾಗೂ ಕಡೆಂಗೋಡ್ಲು ಪ್ರಶಸ್ತಿಯನ್ನು ಡಾ.ರತ್ನಾಕರ ಸಿ.ಹುನಗೋಡಿ ಅವರ ಎದೆನೆಲದ ಕಾವು ಕವನ ಸಂಕಲನಕ್ಕೆ ನೀಡಲಾಯಿತು.

ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಸಂಪತ್ ಕುಮಾರ್ ಹಾಗೂ ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪುತ್ತಿ ವಸಂತ ಕುಮಾರ್ ಅಭಿನಂದನಾ ನುಡಿಗಳನ್ನಾಡಿದರು. ಮಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಆರ್.ನರಸಿಂಹ ಮೂರ್ತಿ ‘ಕಥನ ಕವಿಯಾಗಿ ಕಡೆಂಗೋಡ್ಲು ಶಂಕರಭಟ್ಟ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮೀ ನಾರಾಯಣ ಕಾರಂತ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್‌, ಉಪನ್ಯಾಸಕ ರಾಘವೇಂದ್ರ ತುಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.