ADVERTISEMENT

ಕನ್ನಡ ಸಾಹಿತ್ಯ ಪರಿಷತ್: ಅವಧಿ ವಿಸ್ತರಣೆಗೆ ಹುನ್ನಾರ– ಆರೋಪ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 20:05 IST
Last Updated 28 ಸೆಪ್ಟೆಂಬರ್ 2020, 20:05 IST
ಕೃಷ್ಣಮಠದಲ್ಲಿ ಸೋಮವಾರದಿಂದ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ದರ್ಶನಕ್ಕೆ ಮಾಡಲಾಗಿರುವ ಪ್ರತ್ಯೇಕ ಮಾರ್ಗವನ್ನು ಅಷ್ಟಮಠದ ಯತಿಗಳು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಿದರು
ಕೃಷ್ಣಮಠದಲ್ಲಿ ಸೋಮವಾರದಿಂದ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ದರ್ಶನಕ್ಕೆ ಮಾಡಲಾಗಿರುವ ಪ್ರತ್ಯೇಕ ಮಾರ್ಗವನ್ನು ಅಷ್ಟಮಠದ ಯತಿಗಳು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸಿದರು   

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ ಆಡಳಿತ ಮಂಡಳಿಯ ಆಯ್ಕೆಗೆ ನವೆಂಬರ್‌ ಕೊನೆಯ ವಾರ ಪತ್ರ ಬರೆಯಲಾಗುವುದು ಎಂದು ಹೇಳುವ ಮೂಲಕ ಅಧ್ಯಕ್ಷ ಮನು ಬಳಿಗಾರ ಅವರು ತಮ್ಮ ಅಧಿಕಾರಾವಧಿಯನ್ನು ಮತ್ತೆ 6 ತಿಂಗಳು ವಿಸ್ತರಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ’ ಎಂದು ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ಆರೋಪಿಸಿದ್ದಾರೆ.

‘ಮೂರು ವರ್ಷದ ಅವಧಿಗೆ ಮತ ಕೇಳಿ, ಈಗ ಜನತಂತ್ರಕ್ಕೆ ವಿರುದ್ಧವಾಗಿ 5 ವರ್ಷಕ್ಕೆ ಈಗಾಗಲೇ ತಮ್ಮ ಅವಧಿ ವಿಸ್ತರಿಸಿಕೊಂಡಿದ್ದಾರೆ. ಅವರ ಅವಧಿ 2021ರ ಮಾರ್ಚ್‌ಗೆ ಕೊನೆಗೊಳ್ಳಲಿದೆ. ನವೆಂಬರ್‌ನಲ್ಲಿ ಪತ್ರ ಬರೆದರೆ, ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಹೊಸ ಆಡಳಿತ ಮಂಡಳಿ ಆಯ್ಕೆಯಾಗಲು ಆರು ತಿಂಗಳಿಗಿಂತ ಹೆಚ್ಚು ಕಾಲ ಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಸರ್ಕಾರವು ಚುನಾವಣಾಧಿಕಾರಿಯನ್ನು ನೇಮಕ ಮಾಡುವುದೂ ವಿಳಂಬವಾಗುತ್ತದೆ. ಅಧಿಕಾರ ಅವಧಿ ಮುಗಿಯುವ ಆರು ತಿಂಗಳು ಮೊದಲೇ ಸರ್ಕಾರಕ್ಕೆ ಪತ್ರ ಬರೆಯಬೇಕಾಗಿತ್ತು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಅಧಿಕಾರಾವಧಿ ಪೂರ್ಣಗೊಳ್ಳುವುದಕ್ಕೆ ಮೂರು ತಿಂಗಳು ಮೊದಲು ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ನಿಯಮದಲ್ಲಿದೆ. ಇದನ್ನು ಪರಿಗಣಿಸಿದರೆ ಡಿಸೆಂಬರ್‌ಗೆ ಪತ್ರ ಬರೆಯಬೇಕು. ಆದರೂ ನವೆಂಬರ್‌ಗೇ ಪತ್ರ ಬರೆಯಲು ನಿರ್ಧರಿಸಿದ್ದೇನೆ. ಅವಧಿ ವಿಸ್ತರಿಸಿಕೊಳ್ಳಬೇಕು ಎಂಬ ಯಾವುದೇ ದುರುದ್ದೇಶ ನನಗಿಲ್ಲ’ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.