ಕಾಪು (ಪಡುಬಿದ್ರಿ): ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕಕ್ಕೆ ಪೂರ್ವಭಾವಿಯಾಗಿ ಲಕ್ಷ್ಮಿಜನಾರ್ದನ ದೇವಸ್ಥಾನದ ಸನ್ನಿಧಾನದಲ್ಲಿ ಇರಿಸಲಾದ ಗಂಗಾಜಲವನ್ನು ಮಾರಿಗುಡಿ ದೇವಸ್ಥಾನಕ್ಕೆ ತರಲಾಯಿತು.
ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ ನವಕುಂಭಗಳಲ್ಲಿ ಗಂಗಾಜಲ ತುಂಬಿಸಿ ಧಾರ್ಮಿಕ ವಿಧಿವಿಧಾನಗಳಿಂದ ಪೂಜಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತಂದು ಲಕ್ಷ್ಮಿಜನಾರ್ದನ ದೇವಸ್ಥಾನದಲ್ಲಿ ಇರಿಸಲಾಗಿತ್ತು.
ದೇವಳದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ. ಕುಮಾರ ಗುರು ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ದಂಪತಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ದಂಪತಿ, ಕುಮಾರಗುರು ತಂತ್ರಿ ದಂಪತಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸುಂದರ ಶೆಟ್ಟಿ ದಂಪತಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನವಕುಂಭದಲ್ಲಿ ತುಂಬಿಸಿದ ಗಂಗಾಜಲವನ್ನು ಮಾರಿಗುಡಿ ದೇವಸ್ಥಾನದವರೆಗೆ ಶೋಭಾಯಾತ್ರೆಯಲ್ಲಿ ತರಲಾಯಿತು.
ಬೃಹತ್ ಗಂಟೆ ಲೊಕಾರ್ಪಣೆ: ದಾನಿಗಳ ನೆರವಿನಿಂದ ದೇವಸ್ಥಾನದಲ್ಲಿ ಅಳವಡಿಸಿದ ಬೃಹತ್ ಗಂಟೆಯ ಲೋಕಾರ್ಪಣೆ ಸೋಮವಾರ ನಡೆಯಿತು. ಭಕ್ತರಾದ ಮುಂಬೈಯ ಅರವಿಂದ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸಿದ 1,500 ಕೆ.ಜಿ ತೂಕ, 5 ಅಡಿ ಎತ್ತರದ ಕಂಚಿನ ಈ ಗಂಟೆಯು ಆಂಧ್ರಪ್ರದೇಶದ ಬಿ.ಎಸ್.ಎಂ. ಫೌಂಡ್ರೀಸ್‌ನಲ್ಲಿ ನಿರ್ಮಾಣಗೊಂಡಿದೆ. ದೇಶದ ಅತಿ ದೊಡ್ಡ, 2,200 ಕೆ.ಜಿ ತೂಕದ ಬೃಹತ್ ಗಂಟೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿದೆ. ಮಾರಿಗುಡಿಗೆ ಸಮರ್ಪಿಸಿದ ಗಂಟೆ ದೇಶದ 2ನೇ, ರಾಜ್ಯದ ಅತಿ ದೊಡ್ಡ ಗಂಟೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.