ADVERTISEMENT

ಹೊಸ ಮಾರಿಗುಡಿ: 22ರಿಂದ ಶರನ್ನವರಾತ್ರಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:39 IST
Last Updated 20 ಸೆಪ್ಟೆಂಬರ್ 2025, 5:39 IST
ಕಾಪು ಮಾರಿಯಮ್ಮ
ಕಾಪು ಮಾರಿಯಮ್ಮ   

ಕಾಪು (ಪಡುಬಿದ್ರಿ): ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನ‌ದಲ್ಲಿ ಸೆ. 22ರಿಂದ ಅ. 2ರವರೆಗೆ 11 ದಿನಗಳ ಪರ್ಯಂತ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.

ದೇವಳದಲ್ಲಿ ಶುಕ್ರವಾರ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ವಾಸುದೇವ ಶೆಟ್ಟಿ ಅವರು, ಜೀರ್ಣೋದ್ದಾರದ ಬಳಿಕ ನಡೆಯುವ ಪ್ರಥಮ ಶರನ್ನವರಾತ್ರಿ ಮಹೋತ್ಸವ ದೇವಳದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ. ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದರು.

22ರಂದು ಬೆಳಿಗ್ಗೆ 8.30ಕ್ಕೆ 9 ಗಣ್ಯ ಮಹಿಳೆಯರು ಶರನ್ನವರಾತ್ರಿ ಮಹೋತ್ಸವದ ಉದ್ಘಾಟನೆ ಮಾಡುವರು. 30ರಂದು ಬೆಳಿಗ್ಗೆ 11.30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸುವರು. ಸಂಜೆ 4ರಿಂದ ದೇವಿ ದರ್ಶನ, ಕೆಂಡಸೇವೆ ನಡೆಯಲಿದೆ. ಸಾಮೂಹಿಕ ಚಂಡಿಕಾಯಾಗದಲ್ಲಿ ಭಾಗಿಯಾಗುವ ಭಕ್ತರು ಸೇವಾ ಸಂಕಲ್ಪ ಮಾಡಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10ರಿಂದ ದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳನ್ನು ಏಲಂ ಮಾಡಲಾಗುವುದು. ‌ಅ. 1ರಂದು ಬೆಳಿಗ್ಗೆ 8ರಿಂದ ನವದುರ್ಗಾ ಲೇಖನ ಸಂಕಲ್ಪ, ಪುಸ್ತಕಸ್ಥ ವಾಗ್ದೇವತಾಪೂಜನಂ ನಡೆಯಲಿದೆ. ಪುಸ್ತಕ ಬರೆದವರು ಪೂಜೆಯಲ್ಲಿ ಭಾಗವಹಿಸಬೇಕೆಂದು ನವದುರ್ಗಾ ಲೇಖನ ಯಜ್ಞ ಸಮಿತಿ ತಿಳಿಸಿದೆ. ಸಂಜೆ 5.30ರಿಂದ ದುರ್ಗಾ ನಮಸ್ಕಾರ ಪೂಜಾ ನಡೆಯಲಿದ್ದು, ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯಲ್ಲಿ ಭಕ್ತರು ಭಾಗವಹಿಸಬಹುದು ಎಂದರು.

ADVERTISEMENT

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ  ಮಾತನಾಡಿ, ಶರನ್ನವರಾತ್ರಿಯ ಪ್ರತಿದಿನ ದೇವಿಗೆ ಕಲ್ಪೋಕ್ತ ಪೂಜೆ ನಡೆಯುತ್ತದೆ. ಭಕ್ತರು ಬೆಳಿಗ್ಗೆ 9ರಿಂದ ಸಂಜೆ 6ವರೆಗೆ ಘಂಟಾನಾದ ಸೇವೆ ನೀಡಬಹುದು. ಸಂಜೆ 5.30ರಿಂದ ತಾಲ್ಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಜರಗಲಿದೆ. 7ರಿಂದ ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ತಿಳಿಸಿದರು.

ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ರವಿಕಿರಣ್, ಮನೋಹರ್ ರಾವ್, ಮಾಧವ ಆರ್. ಪಾಲನ್, ಯೋಗೀಶ್ ಶೆಟ್ಟಿ ಬಾಲಾಜಿ, ದಿವಾಕರ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.