ADVERTISEMENT

ಕಾಪು | ‘ಭವ್ಯ ಭಾರತದ ಕನಸು‌ ನನಸಾಗಲಿ’

ಕಾಪು: ತಾಲ್ಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ತಹಶೀಲ್ದಾರ್ ಪ್ರತಿಭಾ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:58 IST
Last Updated 16 ಆಗಸ್ಟ್ 2025, 6:58 IST
ಕಾಪು ತಾಲ್ಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ತಹಶೀಲ್ದಾರ್ ಪ್ರತಿಭಾ ಧ್ವಜಾರೋಹಣ ನೆರವೇರಿಸಿದರು
ಕಾಪು ತಾಲ್ಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ತಹಶೀಲ್ದಾರ್ ಪ್ರತಿಭಾ ಧ್ವಜಾರೋಹಣ ನೆರವೇರಿಸಿದರು   

ಕಾಪು (ಪಡುಬಿದ್ರಿ): ‘ಭಾರತವು ಅಖಂಡ, ಐಕ್ಯತೆಯ ರಾಷ್ಟ್ರವಾಗಬೇಕು. ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ, ನಿರುದ್ಯೋಗ ನಿವಾರಣೆಯಾದಲ್ಲಿ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ’ ಎಂದು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ನಡೆದ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ವೈಚಾರಿಕ– ವೈಜ್ಞಾನಿಕ ಭಾರತವಾಗಬೇಕು. ಮೌಲ್ಯಗಳನ್ನು ಇರಿಸಿ ತಂತ್ರಜ್ಞಾನದ ಅಭಿವೃದ್ಧಿಯಾಗಬೇಕು. ಇಂದಿಗೂ ಮಹಿಳೆಯರು ಆತಂಕದಲ್ಲಿದ್ದು, ಅವರು ನಿರ್ಭೀತಿಯಿಂದ ಇದ್ದಾಗ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ‘ಸ್ವಾತಂತ್ರ‍್ಯ ದಿನವು ಸ್ವಾತಂತ್ರ‍್ಯದ ಗುರಿಯಿರಿಸಿ ಆತ್ಮಾರ್ಪಣೆ ಮಾಡಿ ನಮ್ಮನೆಲ್ಲಾ‌ ಸ್ವತಂತ್ರರನ್ನಾಗಿಸಿದ ಹೋರಾಟಗಾರರನ್ನು ನೆನಪಿಸುವ ದಿನ. ಭಾರತ ಆತ್ಮನಿರ್ಭರದೊಂದಿಗೆ ಸ್ವಾವಲಂಬನೆಯತ್ತ ಸಾಗುತ್ತಿದೆ. ಭಾರತ ಜಗದ್ಗುರು ಆಗಲಿದೆ’ ಎಂದು ಹೇಳಿದರು.

ADVERTISEMENT

ಗಣ್ಯರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದೈವ ಪಾಡ್ದನ ಹಾಡುಗಾರ್ತಿ ಲಿಂಗು ಪಾಣಾರ, ಸಮಾಜ ಸೇವಕ ಗೋಪಾಲ ಪೂಜಾರಿ, ಪಾಕ ಶಾಸ್ತ್ರಜ್ಞ ಗುರುರಾಜ್ ರಾವ್, ಶೈಕ್ಷಣಿಕ ಕ್ಷೇತ್ರದ ಸಾಧಕಿ ವಿನ್ನಿ ಗೋನ್ಸವಾಲ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ತಾಲ್ಲೂಕಿನ ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಯಿಂದ ಹಕ್ಕುಪತ್ರಗಳ ವಿತರಣೆ ಮಾಡಿದರು. ಪೊಲೀಸ್, ಸೇವಾದಳ, ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮುಖಂಡ ಲಾಲಾಜಿ ಆರ್. ಮೆಂಡನ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಪುರಸಭೆ ಅಧಿಕಾರಿ ನಾಗರಾಜ್, ವೃತ್ತ ನಿರೀಕ್ಷಕಿ ಜಯಶ್ರೀ ಮಾಣೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಗಾಂವ್ಕರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಪುರಸಭೆ ಸದಸ್ಯರು, ಪಡುಬಿದ್ರಿ, ಕಾಪು, ಶಿರ್ವ ಠಾಣೆಗಳ ಠಾಣಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಯುವಜನ ಮತ್ತು ಕ್ರೀಡಾ ಇಲಾಖೆ ತಾಲ್ಲೂಕು ಅಧಿಕಾರಿ ರಿತೇಶ್ ಕುಮಾರ್ ಸ್ವಾಗತಿಸಿದರು. ಪಿಡಿಒ ಶ್ರೀನಿವಾಸ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.