
ಕಾಪು (ಪಡುಬಿದ್ರಿ): ಪುರಸಭೆಯ ಮುಂದಿನ ವರ್ಷಕ್ಕೆ ಅಂದಾಜು ಬಜೆಟ್ ಸಿದ್ಧಪಡಿಸಲಾಗಿದ್ದು, ಈ ಬಗ್ಗೆ ಪುರಸಭಾ ಸದಸ್ಯರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗಿದೆ. ಕಾಮಗಾರಿಗಳ ಬೇಡಿಕೆ, ಸಾರ್ವಜನಿಕರ ಅಭಿಪ್ರಾಯದಂತೆ ₹13.09 ಕೋಟಿ ಅಂದಾಜು ವೆಚ್ಚದ ಬಜೆಟ್ ಸಿದ್ಧ ಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಹೇಳಿದರು.
ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಅನುದಾನದ ಲಭ್ಯತೆ ನೋಡಿಕೊಂಡು, ಮೂಲಸೌಕರ್ಯಗಳ ಜೋಡಣೆಯೊಂದಿಗೆ ರಸ್ತೆ, ಚರಂಡಿ, ಬೀದಿ ದೀಪ, ಕಿಂಡಿ ಅಣೆಕಟ್ಟು ರಚನೆ ಮತ್ತು ನಿರ್ವಹಣೆಗೆ ಅನುದಾನದ ಲಭ್ಯತೆ ನೋಡಿಕೊಂಡು ಕೆಲಸ ಮಾಡಲಾಗುವುದು, ಸದಸ್ಯರೆಲ್ಲರ ಸಹಕಾರದೊಂದಿಗೆ ಕಾಮಗಾರಿಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದರು.
ಬಜೆಟ್ ಬಗೆಗಿನ ಸಭೆ ನಡೆಸುವ ಸಂದರ್ಭ ಸಮರ್ಪಕ ಮಾಹಿತಿ ಸಿಕ್ಕಿಲ್ಲ, ಆ ದಿನ ಎರಡೆರಡು ಸಭೆ ಕರೆದಿದ್ದು ಒಂದು ಸಭೆ ರದ್ದಾದ ಪರಿಣಾಮ ಕೆಲವರಿಗೆ ತಪ್ಪು ಮಾಹಿತಿ ರವಾನೆಯಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ನಮ್ಮ ವಾರ್ಡ್‌ಗಳಲ್ಲಿನ ಕಾಮಗಾರಿಯ ಪಟ್ಟಿ ನೀಡಲು ಬಾಕಿಯಿದೆ ಎಂದು ಕೆಲವು ಸದಸ್ಯರು ಸಭೆಯ ಗಮನಕ್ಕೆ ತಂದರು.
ಅದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ, ಕಾಮಗಾರಿ ಪಟ್ಟಿ ನೀಡದೇ ಇರುವ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ನಡೆಯಬೇಕಿರುವ ಕಾಮಗಾರಿಗಳ ಪಟ್ಟಿಯನ್ನು ಶೀಘ್ರ ನೀಡಿದಲ್ಲಿ ಅನುದಾನದ ಲಭ್ಯತೆ ನೋಡಿಕೊಂಡು, ಚರ್ಚಿಸಿ ಕಾಮಗಾರಿ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದರು.
ವಿಶೇಷ ಸಾಮಾನ್ಯ ಸಭೆಯ ನೊಟೀಸ್ ತಲುಪುವಾಗ ವಿಳಂಬವಾಗಿದೆ. ಇದು ನನಗೆ ಮಾತ್ರವೇ ಅಥವಾ ಎಲ್ಲರಿಗೂ ಹೀಗಾಗಿದೆಯೇ ಎಂದು ಆಡಳಿತ ಪಕ್ಷದ ಸದಸ್ಯ ಅನಿಲ್ ಕುಮಾರ್ ಪ್ರಶ್ನಿಸಿದರು. ಹೀಗೇಕೆ ಆಗಿದೆ ಎಂದು ತಿಳಿದಿಲ್ಲ. ಆದರೆ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.
ಪುರಸಭೆ ವ್ಯಾಪ್ತಿಯ ಹೆಚ್ಚಿನ ಎಲ್ಲಾ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಈ ಬಗ್ಗೆ ಚರ್ಚಿಸಲು ವಿಶೇಷ ಸಭೆ ನಡೆಸುವಂತೆ ಸದಸ್ಯರು ಒತ್ತಾಯಿಸಿದರು. ಈ ಹಿಂದೆ ಸದಸ್ಯರ ಒತ್ತಾಯದಂತೆ ವಾಟರ್ ಬೋರ್ಡ್‌ನ ಸಭೆ ಕರೆಯಲಾಗಿದ್ದರೂ ಅದು ಕೆಲವು ಕಾರಣಗಳಿಂದಾಗಿ ರದ್ಧಾಗಿತ್ತು. ಈ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮತ್ತೊಮ್ಮೆ ದಿನ ನಿಗದಿಪಡಿಸಿ, ಶಾಸಕರ ಉಪಸ್ಥಿತಿಯಲ್ಲಿ ಅತೀ ಶೀಘ್ರದಲ್ಲಿ ವಿಶೇಷ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕುರ್ಕಾಲು ಹೊಳೆಯಿಂದ ನೀರು ಬರುವ ಪೈಪ್‌ಲೈನ್ ಜೋಡಣೆ ಸಂದರ್ಭ ಹಿಂದಿನ ಪೈಪ್‌ಲೈನ್‌ಗಳನ್ನು ಕಡಿತಗೊಳಿಸಲಾಗಿದೆ. ನೀರು ಪೂರೈಕೆಗೆ ಮೊದಲೇ ಹಿಂದಿನ ಪೈಪ್‌ಲೈನ್ ಕಡಿತ ಮಾಡಿದ್ದು ಇದರಿಂದಾಗಿ ಕೆಲವೆಡೆ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದು ಶೇ 60ರಷ್ಟು ಪೈಪ್‌ಲೈನ್ ಕಡಿತಗೊಳಿಸಿದ್ದು, ಶೇ 40ರಷ್ಟು ಕನೆಕ್ಷನ್ ಈಗಲೂ ಇವೆ. ಉಳಿದ ಕಡೆಗಳಲ್ಲಿ ಮತ್ತೆ ಪೈಪ್‌ಲೈನ್ ಜೋಡಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು. ಇದರಿಂದಾಗಿ ಅನಗತ್ಯವಾಗಿ ಪುರಸಭೆಗೆ ಹೊರೆ ಉಂಟಾಗಲಿದೆ ಎಂದು ಸದಸ್ಯ ಅನಿಲ್ ಕುಮಾರ್ ದೂರಿದರು.
ಪುರಸಭೆ ಸಿಬ್ಬಂದಿ ಕಚೇರಿ ಕೆಲಸಕ್ಕೆ ತಡವಾಗಿ ಬರುವ ಬಗ್ಗೆ ಕಳೆದ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು ಈ ಬಗ್ಗೆ ಸಿಬ್ಬಂದಿ ಜತೆ ಮಾತುಕತೆ ನಡೆಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಸಮಯಕ್ಕೆ ಸರಿಯಾಗಿ ಬಂದು, ಸಮಯಕ್ಕೆ ಸರಿಯಾಗಿ ನಿರ್ಗಮಿಸುವಂತೆ ಸೂಚಿಸಲಾಗಿದೆ. ಅದಕ್ಕಾಗಿ ಮಾರ್ಗಸೂಚಿ, ಮಾನದಂಡ ಮತ್ತು ನಿರ್ದೇಶನ ನೀಡಲಾಗಿದೆ. ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದಾಗಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.